ಸ್ವೇಚ್ಛಾಚಾರವೇ ಸ್ವಾತಂತ್ರ್ಯವೇ...?

ND
ಸ್ವಾತಂತ್ರ್ಯ ಅಂದರೆ ಬಂಧನದಿಂದ ಮುಕ್ತಿ. ದಬ್ಬಾಳಿಕೆಯಿಲ್ಲದೆ, ನಮ್ಮನ್ನು ನಾವೇ ಆಳುವಂತಹ ಯೋಜನೆ. ಆಗಸ್ಟ್ 15ರಂದು ಭಾರತದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಅಂದು ಎಲ್ಲಿ ನೋಡಿದರಲ್ಲಿ ತ್ರಿವರ್ಣ ಧ್ವಜವು ಹಾರಾಡುತ್ತಿರುತ್ತದೆ. ನಮ್ಮ ದೇಶದ ರಾಜಕೀಯ ಧುರೀಣರಿಂದ ಹಿಡಿದು ಎಲ್ಲಾ ಮಹಾನ್ ವ್ಯಕ್ತಿಗಳು ಅಂದು ಸ್ವಾತಂತ್ರ್ಯದ ಬಗೆಗೆ ಭಾಷಣ ಬೀಗುತ್ತಾರೆ. ಒಟ್ಟಿನಲ್ಲಿ ಸಂಭ್ರಮ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಆದರೆ, ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ನಮ್ಮ ದೇಶದಲ್ಲಿ ಇದೆ? ನಾವು ಸಂಪೂರ್ಣ ಸ್ವತಂತ್ರರೇ? ಅಥವಾ ಇನ್ನೂ ಪರತಂತ್ರರೇ? ಸ್ವಾತಂತ್ರ್ಯ ಎಂದರೆ ಅದು ಎಲ್ಲಾ ವಿಧದಲ್ಲೂ ಎಲ್ಲಾ ವಿಷಯಗಳಲ್ಲೂ ಅನ್ವಯಿಸುತ್ತದೆ. ಬೇರೊಬ್ಬರ ಆಳ್ವಿಕೆಯಿಂದ ಮುಕ್ತಿ ಹೊಂದಿದ ತಕ್ಷಣ ಅದನ್ನು ಸ್ವಾತಂತ್ರ್ಯವೆಂದು ಕರೆಯಲಾಗುವುದಿಲ್ಲ.

ಹಾಗೆ ನೋಡಿದರೆ, ಭಾರತದಲ್ಲಿ ಆಂತರಿಕವಾಗಿ ಜನರಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಇದಕ್ಕೆ ಅನೇಕ ಉದಾಹರಣೆಗಳಿಗೆ. ಕೂಲಿಕಾರ್ಮಿಕರ ಮೇಲೆ ದಬ್ಬಾಳಿಕೆಗಳು, ಕೀಳು ಜಾತಿಯವರ ಮೇಲಿನ ಅವಮಾನಗಳು, ಬಡವರ ಮೇಲಿನ ದೌರ್ಜನ್ಯ ಇನ್ನೂ ಸಾಗುತ್ತಲೇ ಇದೆ. ಹಾಗಿದ್ದರೆ ಇದನ್ನು ಸ್ವಾತಂತ್ರ್ಯ ಎಂದು ಕರೆಯಬಹುದೇ?

ಒಂದು ಕಡೆ ಭಯೋತ್ಪಾದಕರ ಭೀಕರ ಹಾವಳಿ. ನಕ್ಸಲೀಯರ ಸಮಸ್ಯೆ, ಉಗ್ರಗಾಮಿಗಳ ಭೀತಿ. ಇವುಗಳಿಂದೆಲ್ಲಾ ರಕ್ಷಿಸಬೇಕಾದ ನಾಯಕರು ತಮ್ಮ ಹಿತದೃಷ್ಟಿಯನ್ನಷ್ಟೇ ಕಾಪಾಡಿಕೊಂಡು ಬರುತ್ತಿದ್ದಾರೆ. ಇನ್ನು ಉಳಿದವರಿಗೆ ದೇವರೇ ಗತಿ.

ಇಷ್ಟೆಲ್ಲಾ ನಡೆಯುತ್ತಿರುವಾಗ ಸ್ವಾತಂತ್ರ್ಯ ಪೂರ್ವಕ್ಕೂ ಸ್ವಾತಂತ್ರ್ಯ ನಂತರಕ್ಕೂ ಬಹಳಷ್ಟು ವ್ಯತ್ಯಾಸಗಳಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಅನ್ಯರಾಷ್ಟ್ರೀಯರ ದಬ್ಬಾಳಿಕೆಯಾದರೆ, ಇಂದು ಈ ದೇಶದ ಜನರದ್ದೇ ದಬ್ಬಾಳಿಕೆ. ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಮಹಾತ್ಮಾಗಾಂಧಿಯವರು ಮಾತೊಂದನ್ನು ಹೇಳಿದ್ದರು."ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದು ಒಬ್ಬ ಮಹಿಳೆ ಮಧ್ಯರಾತ್ರಿ ಯಾವುದೇ ಭಯವಿಲ್ಲದೆ ನಡೆದಾಗ ಮಾತ್ರ." ಮಧ್ಯರಾತ್ರಿ ಬಿಡಿ. ಈಗ ಹಗಲಲ್ಲಿ ನಡೆಯುವುದೇ ಕಷ್ಟ. ಅಂತಹ ಸ್ವಾತಂತ್ರ್ಯ ರಾಷ್ಟ್ರ ಭಾರತ.

ಇಷ್ಟೆಲ್ಲಾ ಇದ್ದೂ, ನಮ್ಮದು ಸ್ವಾತಂತ್ರ್ಯ ರಾಷ್ಟ್ರ ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ನಮ್ಮೊಳಗಿನ ಸಂಕೋಲೆಗಳನ್ನು ನಾವು ಮೊದಲು ಬಿಡಿಸಿಕೊಳ್ಳಬೇಕು. ನಮ್ಮ ನಡುವಿನ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡಬೇಕು. ಅದನ್ನು ಪಡೆದಾಗ ಮಾತ್ರವೇ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ. ಇಲ್ಲವಾದಲ್ಲಿ ಪರತಂತ್ರವೇ ಹೌದು.

ಇದಕ್ಕಾಗಿ ಇನ್ನಾದರೂ ದೇಶದ ಪ್ರಜೆಗಳಾದ ನಾವು ದೇಶದ ಒಳಿತಿಗಾಗಿ ಎಚ್ಚೆತ್ತುಕೊಂಡು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಪರಸ್ಪರ ಅನ್ಯೋನ್ಯ ಸಂಬಂಧಗಳನ್ನು ಬೆಳೆಸಿಕೊಂಡು ಪ್ರೀತಿ ವಿಶ್ವಾಸವನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ,

ಎಲ್ಲಿದೆಯೋ ಸ್ವಾತಂತ್ರ್ಯ ಎಲ್ಲಿದೆಯೋ ಸ್ವಾತಂತ್ರ್ಯ...
ಸಾಗುತ್ತಿದೆ ಇಲ್ಲಿ ಪರತಂತ್ರ...
ಹಣ ಹೆಂಡವ ಕೊಟ್ಟು ಮತವ ಹಾಕಿಸುವರು....
ಕತ್ತಿ ಮಚ್ಚು ಹಿಡಿದು ಜನರ ಬೆದರಿಸುವರು....

ಎಂದು ಹೇಳಬೇಕಾದ ಪರಿಸ್ಥಿತಿ ಬಂದೊದಗಬಹುದು..

ವೆಬ್ದುನಿಯಾವನ್ನು ಓದಿ