ಬಾಲ್ಟಿಮೋರ್(ಆ.08): ಅಮೆರಿಕದಲ್ಲಿ ಮತ್ತೆ ಕೊರೋನಾ ತಾಂಡವ ಆಡಲು ಆರಂಭಿಸಿದ್ದು, ಮತ್ತೆ ನಿತ್ಯ 1 ಲಕ್ಷ ಪ್ರಕರಣಗಳು ದಾಖಲಾಗತೊಡಗಿವೆ. ಜೂನ್ನಲ್ಲಿ 1 ಲಕ್ಷ ಇದ್ದ ಪ್ರಕರಣಗಳ ಸಂಖ್ಯೆ ಈಗ 1 ಲಕ್ಷ ಮೀರಿದ್ದು, ಆತಂಕ ಸೃಷ್ಟಿಸಿದೆ. ಇದು ಡೆಲ್ಟಾಕೊರೋನಾ ತಳಿಯ ಪ್ರಭಾವ ಎಂದು ಹೇಳಲಾಗಿದೆ.
ಕಳೆದ ವರ್ಷ ಜೂನ್ನಲ್ಲಿ ಸರಾಸರಿ 11 ಸಾವಿರ ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗುತ್ತಿದ್ದವು. ಬಳಿಕ ನವೆಂಬರ್ನಲ್ಲಿ ಪ್ರಕರಣಗಳ ಸಂಖ್ಯೆ 1 ಲಕ್ಷ ಮೀರಿ, ಜನವರಿಯಲ್ಲಿ 3 ಲಕ್ಷ ಪ್ರಕರಣ ಒಂದೇ ದಿನದಲ್ಲಿ ವರದಿಯಾಗಿದ್ದವು. ಆದರೆ ಬಳಿಕ ಕೊರೋನಾ ಇಳಿಕೆ ಕಂಡಿತ್ತು. ದೇಶದಲ್ಲಿ ಈಗ ಶೇ.70 ಜನರಿಗೆ ಕೊರೋನಾ ಲಸಿಕೆ ನೀಡಿದ್ದರೂ ಮತ್ತೆ ಈಗ ಪ್ರಕರಣಗಳ ಸಂಖ್ಯೆ 1 ಲಕ್ಷ ಮೀರತೊಡಗಿದ್ದು, ಶುಕ್ರವಾರ 1.30 ಲಕ್ಷ ಪ್ರಕರಣಗಳು ದಾಖಲಾಗಿವೆ. ಕಳೆದ 4 ದಿನಗಳಿಂದಲೂ ಹೊಸ ಪ್ರಕರಣಗಳ ಸಂಖ್ಯೆ ಲಕ್ಷಕ್ಕಿಂತ ಹೆಚ್ಚೇ ಇದೆ. ಜೊತೆಗೆ 100ರ ಆಸುಪಾಸಿಗೆ ಬಂದಿದ್ದ ದೈನಂದಿನ ಸಾವಿನ ಸಂಖ್ಯೆ ಕೂಡಾ ಮತ್ತೆ 500ರ ಗಡಿ ದಾಟಿದೆ.
ಕೊರೋನಾ ಲಸಿಕೆ ಪಡೆಯದವರಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳತೊಡಗಿದ್ದು, ದಕ್ಷಿಣ ಅಮೆರಿಕದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗತೊಡಗಿವೆ ಹಾಗೂ ಆಸ್ಪತ್ರೆ ದಾಖಲಾತಿ ಕೂಡ ಹೆಚ್ಚಿದೆ. ಆಸ್ಪತ್ರೆಯಲ್ಲಿ ಬೆಡ್ಗಳಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಹೂಸ್ಟನ್ನಲ್ಲಿ ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಲು ಆ್ಯಂಬುಲೆನ್ಸ್ಗಳು ಸರದಿ ಸಾಲಿನಲ್ಲಿ ನಿಂತ ದೃಶ್ಯ ಕಾಣಿಸಿದೆ. ಲಸಿಕೆ ಪಡೆಯದಿದ್ದರೆ ಸ್ಫೋಟ:
ಜನರು ಹೆಚ್ಚು ಸಂಖ್ಯೆಯಲ್ಲಿ ಲಸಿಕೆ ಪಡೆಯದೇ ಹೋದರೆ ಸೋಂಕು ಇನ್ನಷ್ಟುಹೆಚ್ಚಲಿದೆ. ಜನವರಿ ಮಾದರಿಯಲ್ಲೇ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.