ಬೆಂಗಳೂರು: ನವೆಂಬರ್ ಕ್ರಾಂತಿ ಇಲ್ಲ. ಬರೀ ಬ್ರಾಂತಿ ಅಷ್ಟೇ. ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್ ಹೇಳಿದ ಮೇಲೆ ಸಿಎಂ ಬದಲಾವಣೆ ಅನ್ನೋ ವಿಷಯವೇ ಇಲ್ಲ ಎಂದರು.
ನವೆಂಬರ್ ಕ್ರಾಂತಿ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸಿಎಂ ಅವರು ನಾನೇ ಇರುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ನವೆಂಬರ್‌ಗೆ ಸಚಿವ ಸಂಪುಟ ಪುನರ್ ರಚನೆ ಆಗಬಹುದು. ಸಿಎಂ, ಡಿಸಿಎಂ ಮತ್ತು ಹೈಕಮಾಂಡ್ ನಿರ್ಧಾರ ಮಾಡಿ ಯಾವಾಗ ಬೇಕಾದರೂ ಸಂಪುಟ ಪುನರ್ ರಚನೆ ಮಾಡಬಹುದು ಎಂದು ಹೇಳಿದರು.
ಶಿವಕುಮಾರ್ ಬೆಂಗಳೂರು ಸಚಿವರು ಆಗಿದ್ದಾರೆ. ಈಗೇನು ಖಾಲಿ ಇಲ್ಲ. ಖಾಲಿ ಇದ್ದರೂ ಕೂಡ ನಾನೇನು ಕೇಳೋಕೆ ಹೋಗಲ್ಲ. ನಾನು ಯಾವತ್ತು ಮಂತ್ರಿ ಆಗಬೇಕು, ಇಂತಹ ಖಾತೆ ಬೇಕು, ಜಿಲ್ಲಾ ಉಸ್ತುವಾರಿ ಬೇಕು ಅಂತ ಕೇಳಿಲ್ಲ ಎಂದು ಹೇಳಿದರು.