ಮಣಿಪುರದಲ್ಲಿ 40 ಮಂದಿ ದಂಗೆಕೋರರ ಹತ್ಯೆ! ಇಂಟರ್ನೆಟ್ ಸೇವೆ ಬಂದ್
ಸೋಮವಾರ, 29 ಮೇ 2023 (10:19 IST)
ಇಂಫಾಲ್ : ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಾಗರಿಕರ ವಿರುದ್ಧ ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸಿದ್ದ ಕನಿಷ್ಠ 40 ಮಂದಿ ದಂಗೆಕೋರರು ಹತರಾಗಿದ್ದಾರೆ. ಇನ್ನೂ ಕೆಲವು ಕಿಡಿಗೇಡಿಗಳನ್ನ ಬಂಧಿಸಲಾಗಿದೆ ಎಂದು ಸಿಎಂ ಎ. ಬಿರೇನ್ ಸಿಂಗ್ ಭಾನುವಾರ ತಿಳಿಸಿದ್ದಾರೆ.
ಮಣಿಪುರದಲ್ಲಿ ಸದ್ಯ ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ಮೇ 31ರ ವರೆಗೂ ರಾಜ್ಯಾದ್ಯಂತ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಇದೇ ತಿಂಗಳ ಮೇ 3ರಂದು ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು. ಎಸ್ಟಿ ಸ್ಥಾನಮಾನ ನೀಡಬೇಕೆಂಬ ಮೀಟೈ ಸಮುದಾಯದ ಬೇಡಿಕೆಯನ್ನ ವಿರೋಧಿಸಲಾಗಿತ್ತು. ಆ ನಂತರ ಹಿಂಸಾಚಾರ ಭುಗಿಲೆದ್ದಿತ್ತು.
ಭಾನುವಾರ (ಮೇ 28) ಹಿಂಸಾಚಾರ ಪೀಡಿತ ಸ್ಥಳಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿ ನೀಡಿ ಪರಿಶೀಲಿಸಿದರು. ಇದಕ್ಕೆ ಮೂರು ದಿನ ಮುಂಚಿತವಾಗಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸಹ ಮಣಿಪುರ ರಾಜಧಾನಿಗೆ ಭೇಟಿ ನೀಡಿದ್ದರು. ಘರ್ಷಣೆ ನಡೆದು ಒಂದು ತಿಂಗಳಾದರೂ ಮಣಿಪುರದಲ್ಲಿ ಇನ್ನೂ ಅಶಾಂತಿ ವಾತಾವರಣ ಮುಂದುವರಿದಿದೆ.