ಆಫ್ರಿಕಾದ ಮಾಲಿ ದೇಶದಲ್ಲಿ ಒಂದೇ ದಂಪತಿಗೆ ಒಟ್ಟಿಗೆ ಹುಟ್ಟಿದ 9 ಮಕ್ಕಳು ಮೊದಲ ಹುಟ್ಟುಹಬ್ಬವನ್ನು ಆಚರಿಸಿದ್ದು, ಅವರ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
2021ರ ಮೇ.4 ರಂದು ಈ ಮಕ್ಕಳು ಅವಧಿಗೂ ಮುನ್ನವೇ ಜನಿಸಿದ್ದವು. ಏಳು ತಿಂಗಳು ತುಂಬುವುದಕ್ಕೂ ಮೊದಲೇ ಇವರ ತಾಯಿ ಈ 9 ಮಕ್ಕಳಿಗೆ ಜನ್ಮ ನೀಡಿದ್ದರು. ಈ ಒಂಭತ್ತು ಮಕ್ಕಳಲ್ಲಿ ಐವರು ಹೆಣ್ಣು ಮಕ್ಕಳು ಹಾಗೂ ನಾಲ್ವರು ಗಂಡು ಮಕ್ಕಳು. ಒಂಭತ್ತು ಮಕ್ಕಳು ಒಟ್ಟಿಗೆ ಜನಿಸುವ ಮೂಲಕ ಇವರು ವಿಶ್ವ ದಾಖಲೆಯ ಪುಟ ಸೇರಿದ್ದರು.
ಇತ್ತೀಚೆಗೆ ಈ ಮಕ್ಕಳು ತಮ್ಮ ಮೊದಲ ಹುಟ್ಟುಹಬ್ಬವನ್ನು ಆಚರಿಸಿವೆ. ಅವಧಿ ಪೂರ್ವ ಕೇವಲ 30 ವಾರಗಳ ಒಳಗೆ ಈ ಮಕ್ಕಳು ಜನಿಸಿದ್ದರಿಂದ ಅಲ್ಲದೇ ಆರೋಗ್ಯವೂ ಸರಿ ಇಲ್ಲದ ಕಾರಣ ಈ ಮಕ್ಕಳನ್ನು ಮೊರಾಕೋದ ಕ್ಲಿನಿಕ್ನಲ್ಲೇ ಹೆಚ್ಚಿನ ಆರೈಕೆಗೆ ಇರಿಸಲಾಗಿತ್ತು ಎಂದು ಈ ಮಕ್ಕಳ ತಂದೆ ಆಫ್ರಿಕಾ ಬಿಬಿಸಿಗೆ ಹೇಳಿಕೆ ನೀಡಿದ್ದರು.
ಈ ಎಲ್ಲಾ ಮಕ್ಕಳು ಈಗ ತೆವಳಿಕೊಂಡು ಹೋಗುತ್ತಿವೆ. ಕೆಲವು ಕುಳಿತುಕೊಳ್ಳಲು ಪ್ರಯತ್ನಿಸುತ್ತಿವೆ. ಮತ್ತೆ ಕೆಲವು ಏನನ್ನಾದರು ಹಿಡಿದು ನಿಲ್ಲಲು ಪ್ರಯತ್ನಿಸುತ್ತಿವೆ ಎಂದು ಮಗುವಿನ ತಂದೆ ಹೇಳಿದ್ದಾರೆ.
ಆದಾಗ್ಯೂ ಒಂಭತ್ತು ಮಕ್ಕಳನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಮಕ್ಕಳ ತಂದೆ ಅಬ್ದೆಲ್ಕಾದರ್ ಅರ್ಬಿ ಒಪ್ಪಿಕೊಂಡರು. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಯೋಚಿಸಿದಾಗ ಬೇರೆಲ್ಲಾ ವಿಚಾರಗಳು ಮರೆಯಾಗುತ್ತದೆ ಎಂದು ಹೇಳಿದರು.
ಇಷ್ಟು ಮಕ್ಕಳನ್ನು ಒಟ್ಟಿಗೆ ಸಾಕುವುದು ಸುಲಭವಲ್ಲ ಆದರೆ ಇದು ಅದ್ಭುತವಾಗಿದೆ ಎಂದು ಅವರು ಹೇಳಿದರು. 27 ವರ್ಷದ ಹಲೀಮಾ ಸಿಸ್ಸೆ ಮತ್ತು ಅವರ ಪತಿ ಅಬ್ದೆಲ್ಕಾದರ್ ಅರ್ಬಿ ಅವರಿಗೆ ಈ ಒಂಭತ್ತು ಮಕ್ಕಳಲ್ಲದೇ 3 ವರ್ಷ ವಯಸ್ಸಿನ ಇನ್ನೊಬ್ಬ ಮಗಳಿದ್ದಾಳೆ.
ಸಾಮಾನ್ಯವಾಗಿ ಅವಳಿಗಳು ತ್ರಿವಳಿಗಳು ಜನಿಸುವುದು ಸಾಮಾನ್ಯ ಆದರೆ ಒಂಭತ್ತು ಮಕ್ಕಳು ಒಟ್ಟಿಗೆ ಜನಿಸಿದ್ದು ಇದೇ ಮೊದಲು ಎಂಬ ಕಾರಣಕ್ಕೆ ಈ ಮಕ್ಕಳ ಹೆಸರಿನಲ್ಲಿ ವಿಶ್ವ ದಾಖಲೆ ಇದೆ.