ಶ್ರೀನಗರ : ಪಾಕಿಸ್ತಾನ ಮೂಲದ ಉಗ್ರರು ಕಾಶ್ಮೀರಕ್ಕೆ ಆಗಮಿಸಿ ಭಾರತದಲ್ಲಿನ ಆಧಾರ್ ಕಾರ್ಡುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಹೀಗಾಗಿ ಇಂಥ ದುರ್ಬಳಕೆಯನ್ನು ಪತ್ತೆ ಮಾಡಲು ಆ ಕ್ಷಣದಲ್ಲಿ ದುರ್ಬಳಕೆ ಮಾಹಿತಿ ಲಭ್ಯವಾಗುವ ತಂತ್ರಜ್ಞಾನ ರೂಪಿಸುವಂತೆ ಆಧಾರ್ ಪ್ರಾಧಿಕಾರಕ್ಕೆ ಪತ್ರ ಬರೆಯಲು ಜಮ್ಮು-ಕಾಶ್ಮೀರ ಪೊಲೀಸರು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ಮಾಡಿದ್ದ ಪಾಕಿಸ್ತಾನ ಮೂಲದ ಇಬ್ಬರು ಉಗ್ರರನ್ನು ಶ್ರೀನಗರದಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಬಳಿ ಆಗ ಆಧಾರ್ ಕಾರ್ಡುಗಳು ಪತ್ತೆಯಾಗಿದ್ದವು.
ಜಮ್ಮು ವಿಳಾಸದ ಮೂಲ ಆಧಾರ್ ನಂಬರ್ ಇದ್ದ ಆಧಾರ್ ಕಾರ್ಡಿನಲ್ಲಿ ಫೋಟೋವನ್ನು ಮಾತ್ರ ಈ ಉಗ್ರರು ಸೂಪರ್ ಇಂಪೋಸ್ ಮಾಡಿಕೊಂಡಿದ್ದರು. ಇದು ಭದ್ರತಾ ಪಡೆಗಳ ಕಳವಳಕ್ಕೆ ಕಾರಣವಾಗಿದೆ.
ಹೀಗಾಗಿ ಆಧಾರ್ ದುರ್ಬಳಕೆ ಆಗುತ್ತಿದ್ದರೆ, ಆ ಕ್ಷಣವೇ ಸಂಬಂಧಿಸಿದ ಇಲಾಖೆಗೆ ಮಾಹಿತಿ ಲಭಿಸುವ ತಂತ್ರಜ್ಞಾನ ರೂಪಿಸಬೇಕು ಎಂದು ಆಧಾರ್ ಪ್ರಾಧಿಕಾರಕ್ಕೆ ಪತ್ರ ಬರೆಯಲು ಕಾಶ್ಮೀರ ಪೊಲೀಸರು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.