ನವದೆಹಲಿ, ಅ.1 : ದೇಶದ ಪ್ರತಿಷ್ಠಿತ ಏರ್ ಇಂಡಿಯಾವನ್ನು ಟಾಟಾ ಸನ್ಸ್ ಸಮೂಹ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರಹಸ್ಯವಾಗಿರಿಸಲಾದ ನಿರ್ಣಯದ ಬಗ್ಗೆ ಬ್ಲೂಂಬರ್ಗ್ ಸುದ್ದಿ ಸಂಸ್ಥೆ ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಏರ್ ಇಂಡಿಯಾವನ್ನು ಟಾಟಾ ಸಂಸ್ಥೆಗೆ ಸಂಪೂರ್ಣವಾಗಿ ಮಾರಾಟ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವ ಸಮಿತಿ ಅನುಮೋದನೆ ನೀಡಿದೆ.
ಸಮಿತಿಯಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯ ಅವರು ಸದಸ್ಯರಾಗಿದ್ದರು. 2016ರಿಂದಲೂ ಏರ್ ಇಂಡಿಯಾ ಮಾರಾಟ ಪ್ರಯತ್ನಗಳು ನಡೆದಿದ್ದವು. ಆದರೆ ಅದಕ್ಕೆ ಕೆಲವರಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ನಾನಾರೀತಿ ಟೀಕೆಗಳು ಕೇಳಿ ಬಂದಿದ್ದವು. ಹಾಗಾಗಿ ರಾಜಿಕೀಯ ಇಚ್ಚಾಶಕ್ತಿಯ ಕೊರತೆ ಕಂಡು ಬಂದಿತ್ತು. ಜೊತೆಗೆ ಸಮರ್ಥ ಖರೀದಿದಾರರು ಮುಂದೆ ಬಂದಿರಲಿಲ್ಲ.
ಇತ್ತೀಚೆಗೆ ನಡೆದ ಹರಾಜ್ ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಸಮೂಹ ಹೆಚ್ಚು ಮೌಲ್ಯಕ್ಕೆ ಬಿಡ್ ಸಲ್ಲಿಸಿತ್ತು. ಹಣಕಾಸು ಮತ್ತು ತಾಂತ್ರಿಕ ಬಿಡ್ಗಳನ್ನು ತೆರೆಯಲಾಗಿದ್ದು, ಸ್ಪೈಸ್ ಜೆಟ್ಗಿಂತ ಟಾಟಾ ಸನ್ಸ್ ಹೆಚ್ಚು ದರ ಕೋಟ್ ಮಾಡಿದೆ ಎಂದು ಬಹಿರಂಗವಾಗಿತ್ತು.
ಆದರೆ ಸಚಿವರ ಸಮಿತಿ ಅಂಗೀಕರಿಸದ ಹೊರತು ಹರಾಜು ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂಬ ನಿಯಮಗಳಿದ್ದವು. ಅದರಂತೆ ಅಮಿತ್ ಶಾ ನೇತೃತ್ವದ ಸಚಿವರ ಸಮಿತಿ ಬಿಡ್ ಆಯ್ಕೆಗೆ ಅನುಮೋದನೆ ನೀಡಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಸುದ್ದಿ ಸಂಸ್ಥೆಯ ಪ್ರಕಾರ ಈ ವಿಷಯ ಕುರಿತು ಇನ್ನೂ ಅಧಿಕೃತ ಹೇಳಿಕೆಗಳು ಹೊರ ಬಂದಿಲ್ಲ. ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು 2018ರ ಬಜೆಟ್ನಲ್ಲಿ ಪೂರ್ಣ ಪ್ರಮಾಣದಲ್ಲಿ ಘೋಷಣೆ ಮಾಡಿತ್ತು.