ಫ್ರೀಡಂ ಪಾರ್ಕ್‌ನ ಕಾಂಪೌಂಡ್ ನೆಲಸಮದಿಂದ ಪರಿಸರಕ್ಕೆ ಹಾನಿ: ಬಿಜೆಪಿ ದೂರು

Sampriya

ಮಂಗಳವಾರ, 5 ಆಗಸ್ಟ್ 2025 (19:53 IST)
Photo Credit X
ಬೆಂಗಳೂರು: ನಗರದ ಫ್ರೀಡಂ ಪಾರ್ಕಿನ ಪ್ರಾಚೀನ ಕಾಲದ ತಡೆಗೋಡೆಯನ್ನು (ಕಾಂಪೌಂಡ್) ನೆಲಸಮ ಮಾಡಿದ್ದರ ವಿರುದ್ಧ ಬಿಜೆಪಿ ವತಿಯಿಂದ ಇಂದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಲಾಯಿತು.

2024ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಪ್ರತಿಭಟನೆ ಹಮ್ಮಿಕೊಂಡಿರುವ ಸಲುವಾಗಿ ಫ್ರೀಡಂ ಪಾರ್ಕಿನ ಪ್ರಾಚೀನ ಕಾಲದ ತಡೆಗೋಡೆಯನ್ನು (ಕಾಂಪೌಂಡ್) ನೆಲಸಮ ಮಾಡಿದ್ದಾರೆ ಎಂದು ಠಾಣಾಧಿಕಾರಿಗೆ ದೂರು ನೀಡಲಾಗಿದೆ. ಕಾಂಪೌಂಡ್ ನೆಲಸಮ ಮಾಡಿ, ಕಾಂಕ್ರೀಟ್ ರಸ್ತೆ ಮಾಡಿದ ಕಾರ್ಯಕ್ರಮ ಆಯೋಜಕರು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ದೂರಿನಲ್ಲಿ ಕೋರಲಾಗಿದೆ.

ಅಲ್ಲದೇ, ಪಾರ್ಕಿನಲ್ಲಿ ದೊಡ್ಡ ಮರಗಳನ್ನು ಕಡಿದು ಹಾಕಿ ಪರಿಸರ ನಾಶ ಪಡಿಸಿದ್ದಾರೆ ಎಂದು ಗಮನಕ್ಕೆ ತರುವ ದೂರನ್ನು ಬಿಬಿಎಂಪಿ ಅರಣ್ಯಾಧಿಕಾರಿಗೆ ಸಲ್ಲಿಸಲಾಯಿತು. ಯಾವುದೇ ರೀತಿಯ ಅಧಿಕೃತ ಪರವಾನಗಿ ಇಲ್ಲದೇ ಆಡಳಿತ ಪಕ್ಷದ ಅಧಿಕಾರ ದುರ್ಬಳಕೆ ಮಾಡಿಕೊಂಡು ಮರಗಳನ್ನು ಕತ್ತರಿಸಿರುವುದು ಕಾನೂನುಬಾಹಿರ ಕೃತ್ಯವಾಗಿರುತ್ತದೆ. ಈ ದುಷ್ಕೃಂತ್ಯಕ್ಕೆ ಕಾರಣಕರ್ತರಾದ ಸದರಿ ಕಾರ್ಯಕ್ರಮದ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪ್ರಕೋಷ್ಠಗಳ ರಾಜ್ಯ ಸಂಚಾಲಕ ದತ್ತಾತ್ರಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ