ಬ್ರಿಟನ್ : ಬ್ರಿಟಿಷ್ ಚಾನೆಲ್ನಲ್ಲಿ ದೋಣಿಯೊಂದು ಮುಳುಗಿ ಕನಿಷ್ಠ 31 ಮಂದಿ ವಲಸಿಗರು ಜಲಸಮಾಧಿಯಾದ ಭೀಕರ ಘಟನೆ ಬುಧವಾರ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಇದು ಅತ್ಯಂತ ದೊಡ್ಡ ವಲಸೆ ದುರಂತವಾಗಿದೆ ಎಂದು ಫ್ರಾನ್ಸ್ನ ಆಂತರಿಕ ಸಚಿವರು ತಿಳಿಸಿದ್ದಾರೆ.
ದೋಣಿಯಲ್ಲಿ ಒಟ್ಟು 34 ಮಂದಿ ವಲಸಿಗರು ಇದ್ದರು ಎನ್ನಲಾಗಿದೆ. ಅವರ ಪೈಕಿ 31 ಮೃತದೇಹಗಳನ್ನು ಅಧಿಕಾರಿಗಳು ಹೊರ ತೆಗೆದಿದ್ದಾರೆ. ಇದರಲ್ಲಿ ಐವರು ಮಹಿಳೆಯರು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಬ್ಬರು ಬದುಕುಳಿದಿದ್ದಾರೆ. ಇನ್ನೊಬ್ಬ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದಾರೆ. ಈ ಪ್ರಯಾಣಿಕರು ಯಾವ ದೇಶಕ್ಕೆ ಸೇರಿದವರು ಎನ್ನುವುದು ಗೊತ್ತಾಗಿಲ್ಲ. ಆದರೆ ಇವರೆಲ್ಲರೂ ಬ್ರಿಟನ್ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಫ್ರಾನ್ಸ್ನ ಉತ್ತರ ಭಾಗದಲ್ಲಿರುವ ಬಂದರು ನಗರ ಕಲೈಸ್ನಲ್ಲಿ ಈ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಪ್ರಾದೇಶಿಕ ಸಾಗರ ಪ್ರಾಧಿಕಾರವು 27 ಮೃತದೇಹಗಳು ದೊರಕಿದ್ದು, ಇಬ್ಬರು ಜೀವಂತ ಇದ್ದಾರೆ. ಇನ್ನು ನಾಲ್ವರು ಕಾಣೆಯಾಗಿದ್ದಾರೆ ಎಂದು ಮೊದಲು ತಿಳಿಸಿತ್ತು.
ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ನಡುವೆ ಕೆಲವು ಜನರು ಸಿಲುಕೊಂಡಿರುವುದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಫ್ರಾನ್ಸ್ ಮತ್ತು ಬ್ರಿಟಿಷ್ ಅಧಿಕಾರಿಗಳು ಜಲ ಹಾಗೂ ವೈಮಾನಿಕವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.