ವಿಮಾನದಲ್ಲಿ ಅಮೆರಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯನ ಬಂಧನ

ಬುಧವಾರ, 3 ಆಗಸ್ಟ್ 2016 (14:28 IST)
ಲಾಸ್‌ ಏಂಜಲೀಸ್‌ನಿಂದ ನ್ಯೂಜೆರ್ಸಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಅಮೆರಿಕದ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ನಾಗರಿಕನನ್ನು ಬಂಧಿಸಲಾಗಿದೆ.
 
ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದ ನಿವಾಸಿಯಾದ ವೀರಭಧ್ರರಾವ್ ಕುನಮ್ ಎಂಬಾತನೇ ಆರೋಪಿಯಾಗಿದ್ದು ಅಮೆರಿಕದ ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿದೆ.
 
ನ್ಯೂ ಜೆರ್ಸಿ ಕೋರ್ಟ್‌ನ ನ್ಯಾಯಮೂರ್ತಿ ಜೋಸೆಫ್ ಡಿಕನ್ಸನ್, ಆರೋಪಿಗೆ 50 ಸಾವಿರ ಡಾಲರ್‌ ಭದ್ರತೆ ಬಾಂಡ್ ಷರತ್ತಿನ ಮೇರೆಗೆ ಜಾಮೀನು ನೀಡಿದ್ದಾರೆ. ಆದರೆ, ಪ್ರಕರಣ ವಿಚಾರಣೆಗೆ ಬಂದಾಗ ಆರೋಪಿಗೆ ಎರಡು ವರ್ಷಗಳ ಕಾರಾಗೃಹ ಮತ್ತು 250,000 ಡಾಲರ್ ದಂಡ ಭರಿಸಬೇಕಾಗುತ್ತದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.  
 
ಲಾಸ್‌ ಏಂಜಲೀಸ್‌ನಿಂದ ನ್ಯೂಜೆರ್ಸಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಅಮೆರಿಕದ ಮಹಿಳೆಯ ಪಕ್ಕದಲ್ಲಿ ಕುಳಿತಿದ್ದ ವೀರಭಧ್ರರಾವ್ ಕುನಮ್, ಮಹಿಳೆ ನಿದ್ರೆಗೆ ಜಾರಿದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆ ಎಚ್ಚರಗೊಂಡಾಗ ಆತನ ಲೈಂಗಿಕಿ ಕಿರುಕುಳ ಸಹಿಸದೆ ವಿಮಾನದ ಸಿಬ್ಬಂದಿಗೆ ದೂರು ನೀಡಿದ್ದಾಳೆ. 
 
ಆರೋಪಿ ಕುನಮ್, ಮಹಿಳೆಗೆ ಘಟನೆಯ ಬಗ್ಗೆ ಮರೆತುಬಿಡುವಂತೆ ಕೋರಿದ್ದಾನೆ. ಆದರೆ. ಮಹಿಳೆ ವಿಮಾನದ ಭದ್ರತಾ ಸಿಬ್ಬಂದಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ