ಇಸ್ಲಾಮಾಬಾದ್: ಇಸ್ರೋದ ಚಂದ್ರಯಾನ-3 ಯೋಜನೆಯು ಅಂತಿಮ ಹಂತಕ್ಕೆ ತಲುಪಿದೆ. ಇಂದು ಚಂದ್ರನ ಮೇಲ್ಮೈನಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಇದನ್ನು ಐತಿಹಾಸಿಕ ಕ್ಷಣ ಎಂದು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಬಣ್ಣಿಸಿದ್ದಾರೆ.
ಇಮ್ರಾನ್ ಖಾನ್ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ ಫವಾದ್ ಚೌಧರಿ, ಭಾರತೀಯ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದ್ದಾರೆ. ಭಾರತ ಕೈಗೊಂಡಿರುವ ಚಂದ್ರಯಾನ-3 ಮನುಕುಲದ ಐತಿಹಾಸಿಕ ಕ್ಷಣ. ಪಾಕಿಸ್ತಾನದ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ತಮ್ಮ ಟ್ವಿಟ್ಟರ್ (ಎಕ್ಸ್) ಖಾತೆಯಲ್ಲಿ ಪೋಸ್ಟ್ ಹಾಕಿರುವ ಫವಾದ್ ಚೌಧರಿ, ಪಾಕ್ ಮಾಧ್ಯಮಗಳು ಬುಧವಾರ ಸಂಜೆ 6:15 ಕ್ಕೆ ಚಂದ್ರನ ಮೇಲ್ಮೈಗೆ ಚಂದ್ರಯಾನ-3 ಲ್ಯಾಂಡಿಂಗ್ ಆಗುವುದನ್ನು ನೇರಪ್ರಸಾರ ಮಾಡಬೇಕು. ಮಾನವ ಕುಲಕ್ಕೆ ವಿಶೇಷವಾಗಿ ಭಾರತೀಯರಿಗೆ, ವಿಜ್ಞಾನಿಗಳಿಗೆ ಮತ್ತು ಭಾರತದ ಬಾಹ್ಯಾಕಾಶ ಸಮುದಾಯಕ್ಕೆ ಇದೊಂದು ಐತಿಹಾಸಿಕ ಕ್ಷಣ. ಅವರೆಲ್ಲರಿಗೂ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.