ಉಗ್ರನಿಂದ ಇರಿತಕ್ಕೊಳಗಾಗಿದ್ದ ಪೊಲೀಸ್ ಅಧಿಕಾರಿಯನ್ನ ಉಳಿಸಲು ಅವಿರತ ಪ್ರಯತ್ನ ನಡೆಸಿದ ಸಂಸದ

ಗುರುವಾರ, 23 ಮಾರ್ಚ್ 2017 (09:40 IST)
ಬ್ರಿಟನ್ ಅಧಿವೇಶನ ನಡೆಯುತ್ತಿದ್ದ ವೇಳೆ ಲಂಡನ್ನಿನ ಸಂಸತ್ ಸಮೀಪ ನಿನ್ನೆ ನಡೆದ ಭಯೋತ್ಪಾದಕನ ದಾಳಿಯಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿದೆ. ವೇಗವಾಗಿ ಕಾರು ಓಡಿಸಿಕೊಂಡು ಬಂದ ಆಗಂತುಕ ಸಂಸತ್ ಗೇಟ್ ಬಳಿ ನಿಂತಿದ್ದ ಪೊಲೀಸ್ ಅದಿಕಾರಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಕೂಡಲೇ ಪೊಲೀಸರು ಗುಂಡಿಕ್ಕಿ ಆಗಂತುಕನನ್ನ ಹೊಡೆದುರುಳಿಸಿದರಾದರೂ ಅಷ್ಟರೊಳಗೆ 5 ಜೀವ ಹಾನಿಯಾಗಿತ್ತು. ಮೃತರಲ್ಲಿ ಇಬ್ಬರು ಪೊಲೀಸರು ಮತ್ತು ಇಬ್ಬರು ಪಾದಾಚಾರಿಗಳು ಸೇರಿದ್ದಾರೆ.

ಸಂಸತ್ತಿನಲ್ಲಿ ಹೊರಗೆ ಬಂದು ಪೊಲೀಸ್ ರಕ್ಷಣೆಗೆ ನಿಂತ ಸಂಸದ: ಉಗ್ರನ ದಾಳಿಯಿಂದ ಬೆಚ್ಚಿಬಿದ್ದ ಸಂಸದರು ಸಂಸತ್ ಭವನದ ಒಳಗೇ ಅವಿತು ಕುಳಿತಿದ್ದರೆ ಒಬ್ಬ ಸಂಸದ ಮಾತ್ರ ಧೈರ್ಯದಿಂದ ಹೊರಬಂದು ರಕ್ತದ ಮಡುವಿನಲ್ಲಿದ್ದ ಪೊಲೀಸ್ ಅಧಿಕಾರಿಯ ಪ್ರಾಣ ಉಳಿಸಲು ಯತ್ನಿಸಿದ ಘಟನೆ ನಡೆದಿದೆ.

ಸಂಸತ್ ಗೇಟ್ ಬಳಿ ಪೊಲೀಸ್ ಅಧಿಕಾರಿ ಉಗ್ರನಿಂದ ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನ ಗಮನಿಸಿದ ಸಂಸದ ಟೊಬಿಯಾಸ್ ಎಲ್ವುಡ್, ಹೊರಗೆ ಓಡಿ ಬಂದಿದ್ದಾರೆ. ಪ್ರಜ್ಞೆ ತಪ್ಪಿದ್ದ ಪೊಲೀಸ್ ಅಧಿಕಾರಿಯ ಬಾಯಿಗೆ ಬಾಯನ್ನಿಟ್ಟು ಊದುವ ಮೂಲಕ ಪ್ರಜ್ಞೆ ಬರಿಸುವ ಪ್ರಯತ್ನ ನಡೆಸಿದ್ದಾರೆ. ಗಾಯದ ಜಾಗದಲ್ಲಿ ಒತ್ತಡ ಹಾಕಿ ರಕ್ತಸ್ರಾವವನ್ನ ತಡೆಯಲು ಯತ್ನಿಸಿದ್ದಾರೆ. ಏರ್ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿ ಬರುವವರೆಗೂ ಸಂಸದ ಇದೇ ಕೆಲಸ ಮಾಡಿದ್ದಾನೆ. ತನ್ನ ಮಿಲಿಟರಿ ಟ್ರೈನಿಂಗ್ ವೇಳೆ ಪಡೆದ ವೈದ್ಯಕೀಯ ಟಿಪ್ಸ್`ಗಳನ್ನ ಇಲ್ಲಿ ಬಳಸಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಾಣ ಉಳಿಸಲು ಅವಿರತ ಪ್ರಯತ್ನ ನಡೆಸಿದ ಸಂಸದ ಎಲ್ವುಡ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಸಂಸದನ ಮೈಕೈ ಮತ್ತು ಮುಖದ ಮೇಲಿದ್ದ ರಕ್ತದ ಗುರುತುಗಳು ಅವರ ಕೆಲಸವನ್ನ ಸಾರಿ ಹೇಳುತ್ತಿದ್ದವು.

ಆದರೆ, ಸಂಸದ ಟೊಬಿಯಾಸ್ ಎಲ್ವುಡ್ ಪ್ರಯತ್ನ ಫಲ ನೀಡಲಿಲ್ಲ. ಉಗ್ರನಿಂದ ಚಾಕು ಇರಿತಕ್ಕೊಳಗಾಗಿದ್ದ ಪೊಲೀಸ್ ಅಧಿಕಾರಿ ಬದುಕಿ ಉಳಿಯಲಿಲ್ಲ. 

ವೆಬ್ದುನಿಯಾವನ್ನು ಓದಿ