ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಏರಿಕೆ ನಿರೀಕ್ಷೆಯಲ್ಲಿರುವ ರೈತರಿಗೆ ನಿರಾಸೆಯಾಗಿತ್ತು. ಆದರೆ ಇಂದು ಬೆಳೆಗಾರರು ಕೊಂಚ ಮಟ್ಟಿಗೆ ಸಮಾಧಾನಪಡುವ ಸುದ್ದಿ ಬಂದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ವಾರ ಆರಂಭದಲ್ಲೇ ಅಡಿಕೆ ಬೆಲೆ ಇಳಿಕೆಯಾಗಿತ್ತು. ಇದಾದ ಬಳಿಕ ಬೆಲೆ ಏರಿಕೆಯೂ ಆಗಿಲ್ಲ, ಇಳಿಕೆಯೂ ಆಗಿಲ್ಲ. ಅಡಿಕೆ ಬೆಲೆ ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಈ ವಾರದ ಆರಂಭದಿಂದಲೂ ಅದೇ ಪರಿಸ್ಥಿತಿಯಿದೆ. ಅಡಿಕೆ ಬೆಲೆಯಲ್ಲಿ ಇಂದೂ ಯಾವುದೇ ವ್ಯತ್ಯಾಸವಾಗಿಲ್ಲ. ಹೊಸ ಅಡಿಕೆ ಬೆಲೆ 475 ರೂ.ಗಳಷ್ಟೇ ಇದೆ. ಹಳೆ ಅಡಿಕೆ ಬೆಲೆಯೂ ಏರಿಕೆ-ಇಳಿಕೆಯಾಗದೇ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.
ಆದರೆ ಹೊಸ ಪಟೋರ ಮತ್ತು ಹಳೆ ಪಟೋರ ದರದಲ್ಲಿ ಕೊಂಚ ಏರಿಕೆಯಾಗಿದೆ. ನಿನ್ನೆ ಹೊಸ ಪಟೋರ ದರ ಮತ್ತು ಹಳೆ ಪಟೋರ ದರ ತಲಾ 360 ರೂ.ಗಳಷ್ಟಿತ್ತು. ಇಂದು ಎರಡೂ ತಲಾ 365 ರೂ.ಗಳಾಗಿವೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಆದರೆ ಇಂದು ಕೊಂಚ ಇಳಿಕೆಯಾಗಿದೆ. ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 5 ರೂ.ಗಳಷ್ಟು ಇಳಿಕೆಯಾಗಿದ್ದು 250 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರವೂ ವ್ಯತ್ಯಾಸವಾಗಿಲ್ಲ. ಇಂದೂ ತಲಾ 310 ರೂ.ಆಗಿದೆ. ಕಾಳುಮೆಣಸು ದರ
ನಿನ್ನೆ ಕಾಳುಮೆಣಸು ದರದಲ್ಲಿಏರಿಕೆಯಾಗದೇ ಇದ್ದರೂ ಇಳಿಕೆಯಾಗಿಲ್ಲ ಎನ್ನುವುದೇ ಸಮಾಧಾನಕರ ವಿಚಾರವಾಗಿತ್ತು. ಆದರೆ ಇಂದು ಮತ್ತೆ 5 ರೂ. ಕುಸಿತವಾಗಿದೆ. ಇಂದು 640 ರೂ.ಗಳಷ್ಟಿವೆ. ಇನ್ನು ಒಣಕೊಬ್ಬರಿ ಬೆಲೆ ಕಳೆದ ವಾರ ಏರಿಕೆಯಾಗಿತ್ತು. ಈಗಲೂ ನಾಲ್ಕೈದು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಇಂದೂ 235 ರೂ. ಗಳಷ್ಟಿದೆ.