ನೋ ಎಂಟ್ರಿ!: 13 ರಾಷ್ಟ್ರಗಳ ವಿಮಾನ ಸಂಚಾರ ನಿಷೇಧ

ಶುಕ್ರವಾರ, 2 ಜುಲೈ 2021 (09:35 IST)
ನವದೆಹಲಿ (ಜು. 2): ಕೊರೋನಾ ಅಟ್ಟಹಾಸದಿಂದಾಗಿ ಅನೇಕ ದೇಶಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಭಾರತದಲ್ಲಿ ಕೂಡ ಜುಲೈ 31ರವರೆಗೆ ಅಂತಾರಾಷ್ಟ್ರೀಯ ಕಮರ್ಷಿಯಲ್ ವಿಮಾನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದರ ನಡುವೆ ಸೌದಿ ರಾಷ್ಟ್ರಗಳಿಗೆ ಭಾರತ, ಪಾಕಿಸ್ತಾನ, ಅಮೆರಿಕ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ಕಾಂಗೋ, ಉಗಾಂಡ, ಲಿಬೆರಿಯ, ದಕ್ಷಿಣ ಆಫ್ರಿಕಾ, ನೈಜೀರಿಯ ದೇಶಗಳ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ.
 

ಭಾರತದಲ್ಲಿ ಕೊರೋನಾ ಮೂರನೇ ಅಲೆಯ ಆತಂಕ ಹೆಚ್ಚಾಗಿದ್ದು, ಇದರ ಜೊತೆಗೆ ಬ್ಲಾಕ್ ಫಂಗಸ್, ವೈಟ್ ಫಂಗಸ್, ಡೆಲ್ಟಾ ಪ್ಲಸ್ ಮುಂತಾದ ಹೊಸ ರೂಪದ ಸೋಂಕುಗಳು ಪತ್ತೆಯಾಗುತ್ತಿವೆ. ಇದರಿಂದ ಹಲವು ದೇಶಗಳಲ್ಲಿ ಭಾರತದ ವಿಮಾನಗಳ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಯುಎಇ ಕೂಡ ಭಾರತ, ಪಾಕಿಸ್ತಾನ ಸೇರಿ 13 ರಾಷ್ಟ್ರಗಳ ಪ್ರಯಾಣಿಕರಿಗೆ ನಿಷೇಧ ಹೇರಿದೆ. ಜುಲೈ 21ರವರೆಗೆ ಈ ನಿಷೇಧ ಮುಂದುವರೆಯಲಿದೆ. ಕೊರೋನಾ ಸೋಂಕು ಹೆಚ್ಚಿರುವ 13 ರಾಷ್ಟ್ರಗಳಿಗೆ ಈ ನಿಷೇಧ ಅನ್ವಯವಾಗಲಿದೆ.
ಕೊರೋನಾ ಹಾವಳಿ ಹೆಚ್ಚಾಗಿರುವುದರಿಂದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿ 13 ರಾಷ್ಟ್ರಗಳ ಪ್ರಯಾಣಿಕರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಯುಎಇಯ ನಾಗರಿಕ ವಿಮಾನಯಾನ ಪ್ರಾಧಿಕಾರ ಘೋಷಿಸಿದೆ. ಭಾರತದಲ್ಲಿ ಲಾಕ್ಡೌನ್ ತೆರವುಗೊಳಿಸಿದ ಬಳಿಕ ಜೂನ್ 23ರಿಂದ ದುಬೈನಿಂದ ಭಾರತಕ್ಕೆ ವಿಮಾನ ಸಂಚಾರ ಶುರುವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಜುಲೈ 7ರಿಂದ ವಿಮಾನಗಳಿಗೆ ಟಿಕೆಟ್ ಬುಕಿಂಗ್ ಕೂಡ ಆರಂಭಿಸಲಾಗಿತ್ತು. ಆದರೆ, ಮತ್ತೆ ಪ್ರವೇಶ ನಿಷೇಧದ ಗಡುವನ್ನು ವಿಸ್ತರಿಸಲಾಗಿದೆ.
ಕಳೆದ ಏಪ್ರಿಲ್ನಿಂದ ಅರಬ್ ರಾಷ್ಟ್ರಗಳಿಗೆ ಭಾರತದಿಂದ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಜೂನ್ ಅಂತ್ಯದ ವೇಳೆಗೆ ಈ ನಿರ್ಬಂಧ ತೆರವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ತಿಂಗಳಾಂತ್ಯದವರೆಗೆ ಮತ್ತೆ ನಿರ್ಬಂಧ ವಿಸ್ತರಿಸಲಾಗಿದೆ. ಆದರೆ, ಯುಎಇ ನಾಗರಿಕರು, ಅಧಿಕಾರಿಗಳಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ