ಚಾಬಹರ್ ಬಂದರಿನ ಒಪ್ಪಂದಕ್ಕೆ ಭಾರತ-ಇರಾನ್ ಅಂಕಿತ

ಸೋಮವಾರ, 23 ಮೇ 2016 (15:30 IST)
ಭಾರತ ಮತ್ತು ಇರಾನ್ ಸೋಮವಾರ ಚಾಬಹರ್ ಬಂದರನ್ನು ಇರಾನ್‌ನಲ್ಲಿ ಅಭಿವೃದ್ಧಿಮಾಡುವ ಐತಿಹಾಸಿಕ ಒಪ್ಪಂದ ಸೇರಿದಂತೆ 12 ಒಪ್ಪಂದಗಳಿಗೆ ಸಹಿಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಭೇಟಿ ಬಳಿಕ ಒಪ್ಪಂದಗಳಿಗೆ ಅಂಕಿತ ಹಾಕಲಾಯಿತು.
 
 ಜಂಟಿ ಹೇಳಿಕೆಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಚಾಬಹರ್ ಬಂದರು  ಮತ್ತು ಸಂಬಂಧಿಸಿದ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಭಾರತದಿಂದ 500 ದಶಲಕ್ಷ ಡಾಲರ್ ಲಭ್ಯತೆಯ ಒಪ್ಪಂದವು ಮುಖ್ಯ ಮೈಲಿಗಲ್ಲಾಗಿದೆ ಎಂದು ತಿಳಿಸಿದರು. ಇರಾನ್ ದೇಶಕ್ಕೆ ಭೇಟಿ ನೀಡುತ್ತಿರುವುದು ಮಹಾ ಸುಯೋಗವಾಗಿದೆ. ಭಾರತ ಮತ್ತು ಇರಾನ್ ಹೊಸ ಸ್ನೇಹಿತರಲ್ಲ. ಇತಿಹಾಸದಷ್ಟೇ ನಮ್ಮ ದೋಸ್ತಿಯೂ ಹಳೆಯದಾಗಿದೆ. ನಾವು ಪರಸ್ಪರರ ಬೆಳವಣಿಗೆ ಮತ್ತು ಸಂಪದಭಿವೃದ್ಧಿ ಹಿತಾಸಕ್ತಿಗಳನ್ನು ಸುಖ, ದುಃಖಗಳನ್ನು ಹಂಚಿಕೊಂಡಿದ್ದೇವೆ ಎಂದು ಮೋದಿ ಹೇಳಿದರು.
 
ಪ್ರಾದೇಶಿಕ ಸನ್ನಿವೇಶ ಮತ್ತು ಸಮಾನ ಕಾಳಜಿಯ ಜಾಗತಿಕ ವಿಷಯಗಳನ್ನು ಕುರಿತು ನಾವು ಅಭಿಪ್ರಾಯ ಹಂಚಿಕೊಂಡೆವು.  ನಮ್ಮ ನೆಲಗಳಲ್ಲಿ ಅಸ್ಥಿರತೆ, ಮೂಲಭೂತವಾದ ಮತ್ತು ಭಯೋತ್ಪಾದನೆಯ ಶಕ್ತಿ ಹರಡುತ್ತಿರುವ ಬಗ್ಗೆ ಕಳವಳ ಹಂಚಿಕೊಂಡೆವು ಎಂದು ಪ್ರಧಾನಿ ನುಡಿದರು.
 
 ಚಾಬಹರ್ ನೈರುತ್ಯ ಇರಾನ್‌ನಲ್ಲಿದ್ದು ಪಾಕಿಸ್ತಾನದ ಮೂಲಕ ಹಾದುಹೋಗದೇ ಆಫ್ಘಾನಿಸ್ತಾನಕ್ಕೆ ಮಾರ್ಗವನ್ನು ತೆರೆದಿಡುತ್ತದೆ. ಚಾಬಹರ್ ಬಂದರಿನಿಂದ ಇರಾನ್ ರಸ್ತೆ ಜಾಲವು ಆಫ್ಘಾನಿಸ್ತಾನದ ಜರಾಂಗ್‌ವರೆಗೆ 883 ಕಿಮೀ ದೂರ ಕೊಂಡಿ ಕಲ್ಪಿಸಿದೆ.
 ಈ ಬಂದರನ್ನು ಕಚ್ಚಾ ತೈಲ ಮತ್ತು ಯೂರಿಯಾದ ಸಾಗಣೆಗೆ ಬಳಸುವುದರಿಂದ ಭಾರತಕ್ಕೆ ಸಾಗಣೆ ವೆಚ್ಚವನ್ನು ತಗ್ಗಿಸುತ್ತದೆ.

ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ

ವೆಬ್ದುನಿಯಾವನ್ನು ಓದಿ