ಕೈಲಾಗದವನು ಮೈಪರಚಿಕೊಂಡ, ಕೋವಿಡ್ ಲಸಿಕೆ ಬಿಜೆಪಿ ಲಸಿಕೆಯಲ್ಲ: ಸಿಎಂಗೆ ಟಾಂಗ್ ಕೊಟ್ಟ ಆರ್‌ ಅಶೋಕ್‌

Sampriya

ಮಂಗಳವಾರ, 1 ಜುಲೈ 2025 (19:16 IST)
ಬೆಂಗಳೂರು: ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಕ್ಕೆ ಕೋವಿಡ್ ಲಸಿಕೆ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಸಿಎಂಗೆ ವಿಪಕ್ಷ ನಾಯಕ ಆರ್‌ ಅಶೋಕ್ ಪ್ರತಿಕ್ರಿಯಿಸಿ ಬಿಜೆಪಿ ಲಸಿಕೆ ಅಲ್ಲ, ಇದು ಕೋಟ್ಯಂತರ ಭಾರತೀಯರನ್ನು ರಕ್ಷಿಸಿದ ಲಸಿಕೆ ಎಂದಿದ್ದಾರೆ.

ಸಿಎಂ ಪೋಸ್ಟ್‌ಗೆ ಆರ್‌ ಅಶೋಕ್‌ ಪ್ರತೀಕ್ರಿಯಿಸಿದ್ದಾರೆ. 

ಹಾಸನ ಜಿಲ್ಲೆಯಲ್ಲಿ ಈಚೆಗೆ ಸಂಭವಿಸುತ್ತಿರುವ ಹಠಾತ್ ಹೃದಯಾಘಾತಗಳಿಂದ ಇಪ್ಪತ್ತಕ್ಕೂ ಹೆಚ್ಚು ಅಮೂಲ್ಯ ಯುವ ಜೀವಗಳು
ಬಲಿಯಾಗಿರುವುದು ಅತ್ಯಂತ ದುಃಖದ ವಿಷಯ ಮತ್ತು ಆತಂಕಕಾರಿ ಬೆಳವಣಿಗೆ. ಆದರೆ ಇದಕ್ಕಿಂತ ಹೆಚ್ಚು ಆತಂಕಕಾರಿ ಸಂಗತಿ ಎಂದರೆ, ಈ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಮತ್ತು ಸಂವೇದನಾ ರಹಿತ ಸ್ಪಂದನೆ.

ಜನ ಸಾಮಾನ್ಯರಲ್ಲಿ ಮನೆಮಾಡಿರುವ ಆತಂಕಕ್ಕೆ ಸ್ಪಂದಿಸಿ ಪರಿಹಾರ ಹುಡುಕಬೇಕಾದ ಸರ್ಕಾರ, ಕೋವಿಡ್ ಲಸಿಕೆಗಳ ಮೇಲೆ ಹುಯಿಲೆಬ್ಬಿಸುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಕೋವಿಡ್ ಲಸಿಕೆಗೆ ಆತುರದಲ್ಲಿ ಅನುಮತಿ ಕೊಟ್ಟಿರುವುದು ಈ ಸಾವುಗಳಿಗೆ ಕಾರಣವಾಗಿರಬಹುದು ಎಂಬ ಸಿಎಂ ಸಿದ್ದರಾಮಯ್ಯ  ಅವರ ಬೇಜವಾಬ್ದಾರಿ ಹೇಳಿಕೆ, ಯಾವುದೇ ವೈಜ್ಞಾನಿಕ ಆಧಾರವಿಲ್ಲದ, ಅಪಾಯಕಾರಿ ಹಾಗೂ ಜನ ಸಾಮಾನ್ಯರ ಮನಸ್ಸಿನಲ್ಲಿ ಅನಗತ್ಯ ಆತಂಕ ಹುಟ್ಟಿಸುವ ಹೇಳಿಕೆಯಾಗಿದೆ.

ಸಿಎಂ ಸಿದ್ದರಾಮಯ್ಯನವರೇ, ಒಂದು ವಿಷಯ ನೆನಪಿಟ್ಟುಕೊಳ್ಳಿ. ಕೋವಿಡ್ ಲಸಿಕೆ ಬಿಜೆಪಿ ಲಸಿಕೆ ಅಲ್ಲ, ಇದು ಕೋಟ್ಯಂತರ ಭಾರತೀಯರನ್ನು ರಕ್ಷಿಸಿದ ಲಸಿಕೆ.

ಇದು ಭಾರತೀಯ ವಿಜ್ಞಾನಿಗಳ, ವೈದ್ಯಕೀಯ ತಜ್ಞರ ಪರಿಶ್ರಮದ ಫಲ. ಈ ಲಸಿಕೆ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಕೋಟ್ಯಂತರ ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳು ಮಾನ್ಯತೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಲಸಿಕೆಯನ್ನು ಇಂದು ರಾಜಕೀಯ ಲಾಭಕ್ಕಾಗಿ ಅನುಮಾನಿಸುವುದು, ಅದರ ಬಗ್ಗೆ ಅಪಪ್ರಚಾರ ಮಾಡುವುದು ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ, ವೈದ್ಯಕೀಯ ಲೋಕಕ್ಕೆ ಮಾಡುವ ಅಪಮಾನ.

ಕೈಲಾಗದವನು ಮೈಪರಚಿಕೊಂಡ ಎಂಬಂತೆ, ಕೋವಿಡ್ ಲಸಿಕೆಯನ್ನು ದೂಷಿಸುವ ಬದಲು, ಈ ಸಾವುಗಳನ್ನು ತಡೆಗಟ್ಟಲು ತಮ್ಮ ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವುದನ್ನ ತಮ್ಮ ಆತ್ಮಸಾಕ್ಷಿಯನ್ನು  ಒಮ್ಮೆ ಪ್ರಶ್ನಿಸಿಕೊಳ್ಳಿ.

❓ಹಾಸನ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಏನು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ?

❓‘ಹೃದಯ ಜ್ಯೋತಿ’ ಮತ್ತು ‘ಗೃಹ ಆರೋಗ್ಯ’ ಯೋಜನೆಗಳು ಕೇವಲ ಘೋಷಣೆಗಳಿಗೆ, ಜಾಹೀರಾತುಗಳಿಗೆ ಸೀಮಿತವಾಗಿದೆಯೋ ಅಥವಾ ಏನಾದರೂ ಕಾರ್ಯರೂಪಕ್ಕೆ ಬಂದಿದೆಯೋ?

❓ಫೆಬ್ರವರಿಯಲ್ಲೇ ನೇಮಕವಾಗಿದ್ದ ಡಾ.ರವೀಂದ್ರನಾಥ್ ನೇತೃತ್ವದ ಸಮಿತಿಯ ಅಧ್ಯಯನದ ವರದಿ ಯಾವ ಹಂತದಲ್ಲಿದೆ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಕೋವಿಡ್ ಲಸಿಕೆಯ ಮೇಲೆ ಗೂಬೆ ಕೂರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ಯಾವ ಸೀಮೆ ಆತ್ಮಸಾಕ್ಷಿ?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ