ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಂತ ಸಾಮಾಜಿಕ ಜಾಲತಾಣ ಆರಂಭಿಸುವುದಾಗಿ ಘೋಷಿಸಿದ್ದಾರೆ. ಅಮೆರಿಕ ಚುನಾವಣೆ ಸಂದರ್ಭದಲ್ಲೇ ಟ್ರಂಪ್ ಈ ಕುರಿತು ಘೋಷಿಸಿದ್ದರು.
ಪ್ರಸ್ತುತ ತಮ್ಮ ಘೋಷಣೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಟ್ರೂತ್ ಸೋಷಿಯಲ್ ಎಂದು ಹೆಸರಿಡಲಾಗಿದೆ. ನವೆಂಬರ್ನಲ್ಲಿ ಟ್ರೂತ್ ಸೋಷಿಯಲ್ ಲಾಂಚ್ ಆಗುವ ಸಾಧ್ಯತೆ ಇದೆ. ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಟ್ರಂಪ್, ತಾಲಿಬಾನಿಗಳು ಟ್ವಿಟರ್ನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ನಮ್ಮ ಅಮೇರಿಕಾ ಅಧ್ಯಕ್ಷರು ಈ ಕುರಿತು ಮೌನತಾಳಿದ್ದಾರೆ. ಅಂತಹ ಜಗತ್ತಿನಲ್ಲಿ ನಾವು ಜೀವಿಸುತ್ತಿದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಡೊನಾಲ್ಡ್ ಟ್ರಂಪ್ ಫೇಸ್ಬುಕ್ ಹಾಗೂ ಟ್ವಿಟರ್ನಿಂದ ನಿಷೇಧಕ್ಕೊಳಗಾಗಿದ್ದಾರೆ. ವಿವಾದಾತ್ಮಕ ಪೋಸ್ಟ್ಗಳಿಂದ ಅವರು ಸಾಮಾಜಿಕ ಜಾಲತಾಣಗಳಿಂದ ಬ್ಯಾನ್ ಆಗಿದ್ದರು. ಆ ಸಮಯದಲ್ಲಿ ಟೆಕ್ ದೈತ್ಯರಿಗೆ ಸಡ್ಡು ಹೊಡೆಯಲು ಪ್ರತ್ಯೇಕ ಸಾಮಾಜಿಕ ಜಾಲತಾಣ ಆರಂಭಿಸುವ ಮುನ್ಸೂಚನೆ ನೀಡಿದ್ದರು. ಇದೀಗ ಟ್ರಂಪ್ ಮೀಡಿಯಾ ಆಂಡ್ ಟೆಕ್ನಾಲಜಿ ಸಂಸ್ಥೆಯ ಮೊದಲ ಪ್ರಾಜೆಕ್ಟ್ನ ಭಾಗವಾಗಿ ಟ್ರೂಥ್ ಸೋಷಿಯಲ್ ಲಾಂಚ್ ಆಗಲಿದೆ.