ಬೆಂಗಳೂರು: ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ಹಲವು ಎಚ್ಚರಿಕೆಗಳ ಮಧ್ಯೆಯೂ ಹೇಳಿಕೆ ಮುಂದುವರೆಸಿರುವ ಶಾಸಕ ಬಸವರಾಜು ವಿ ಶಿವಗಂಗಾ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಬಿಸಿ ಮುಟ್ಟಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಸಿಎಂ ಅಧಿಕಾರ ಮತ್ತಿತರ ವಿಚಾರಗಳ ಬಗ್ಗೆ ಯಾರೂ ಮಾತಾಡಬಾರದು. ಶಾಸಕರು ಪಕ್ಷದ ಶಿಸ್ತು ಪಾಲಿಸಬೇಕು. ಚೌಕಟ್ಟು ಮೀರಬಾರದು.
ಅನಗತ್ಯ ಹೇಳಿಕೆಗಳನ್ನು ಕೊಟ್ಟು ಗೊಂದಲ ಮೂಡಿಸಬಾರದು ಎಂದು ಈ ಹಿಂದೆಯೇ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಆದರೂ ಶಿವಗಂಗಾ ಮತ್ತೇ ಮತ್ತೇ ಹೇಳಿಕೆ ನೀಡಿ, ಪಕ್ಷದ ಶಿಸ್ತಿನ ಉಲ್ಲಂಘನೆ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.
ಚನ್ನಗಿರಿ ವಿಧಾನಸಭೆ ಕ್ಷೇತ್ರದ ಶಾಸಕ ಬಸವರಾಜು ವಿ ಶಿವಗಂಗಾ ಅವರು ದಾವಣಗೆರೆಯಲ್ಲಿ ಇಂದು ಸಿಎಂ ಅಧಿಕಾರ ಕುರಿತು ಹೇಳಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.