ಪಾಕಿಸ್ತಾನ ಉಗ್ರರ ಸುರಕ್ಷತೆಯ ಸ್ವರ್ಗವಲ್ಲ: ಪಾಕ್ ರಕ್ಷಣಾ ಸಚಿವ

ಮಂಗಳವಾರ, 5 ಸೆಪ್ಟಂಬರ್ 2017 (19:36 IST)
ಪಾಕಿಸ್ತಾನದಲ್ಲಿರುವ ಉಗ್ರಗಾಮಿ ಗುಂಪುಗಳಿಂದ ಪ್ರಾದೇಶಿಕ ಭದ್ರತೆಗೆ ಧಕ್ಕೆಯಾಗುತ್ತಿದೆ ಎನ್ನುವ ಐದು ರಾಷ್ಟ್ರಗಳ ಬ್ರಿಕ್ಸ್ ಸಮಾವೇಶದ ನಿರ್ಣಯವನ್ನು ಪಾಕ್ ರಕ್ಷಣಾ ಸಚಿವ ತಳ್ಳಿಹಾಕಿದ್ದು, ಯಾವುದೇ ಉಗ್ರ ಸಂಘಟನೆ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.  
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳಿಂದ ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬ್ರಿಕ್ಸ್ ಹೇಳಿಕೆಯ ನಂತರ ಪಾಕ್ ಸಚಿವರ ಪ್ರತಿಕ್ರಿಯೆ ಹೊರಬಿದ್ದಿದೆ.
 
ಉಗ್ರಗಾಮಿ ಸಂಘಟನೆಗಳು ಪಾಕಿಸ್ತಾನದಲ್ಲಿ ಕೆಲವು ಅವಶೇಷಗಳನ್ನು ಹೊಂದಿವೆ, ನಾವು ಅವುಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ ಎಂದು ರಕ್ಷಣಾ ಸಚಿವ ಖುರಾಮ್ ದಸ್ತಗಿರ್ ಖಾನ್ ಹೇಳಿದ್ದರೆ. ಆದರೆ, ಯಾವ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲವೆಂದು ಮೂಲಗಳು ತಿಳಿಸಿವೆ. 
 
ಪಾಕಿಸ್ತಾನ ಉಗ್ರವಾದಿಗಳಿಗೆ ಸುರಕ್ಷತೆಯ ಸ್ವರ್ಗವಾಗಿದೆ ಎನ್ನುವುದನ್ನು ನಾವು ಒಪ್ಪುವುದಿಲ್ಲ ಎಂದು ಪಾಕಿಸ್ತಾನ ತಿರಸ್ಕರಿಸಿದೆ. 
 
ಕಳೆದ 2001ರಲ್ಲಿ ಸಂಸತ್ ಮೇಲೆ ನಡೆದ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆ ಮತ್ತು ಮುಂಬೈ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಲಷ್ಕರ್ ಉಗ್ರರ ಕೈವಾಡವಿರುವುದು ಸಾಬೀತಾದ ಬಗ್ಗೆ ಬ್ರಿಕ್ಸ್ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ