ವಿಶ್ವದ ಭಯೋತ್ಪಾದಕ ಕೃತ್ಯಗಳಲ್ಲಿ ಪಾಕ್‌ನ ಬೆರಳಚ್ಚು: ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

Sampriya

ಶನಿವಾರ, 28 ಸೆಪ್ಟಂಬರ್ 2024 (14:43 IST)
Photo Courtesy X
ನ್ಯೂಯಾರ್ಕ್‌: ಭಾರತದ ಅವಿಭಾಗ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರ ವಿಚಾರದವನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ, ಕೆಣಕಿದ ಪಾಕಿಸ್ತಾನಕ್ಕೆ ಭಾರತ ಕಠಿಣ ಎಚ್ಚರಿಕೆ ರವಾನಿಸಿದೆ.

ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಪ್ರತಿಕ್ರಿಯೆ ನೀಡಿ,ಗಡಿಯಾಚೆಗಿನ ಭಯೋತ್ಪಾದನೆಯನ್ನು ರಾಜ್ಯ ನೀತಿಯಾಗಿ ಬಳಸುವ ಪಾಕಿಸ್ಥಾನದ ಸುದೀರ್ಘ ಇತಿಹಾಸದ ಬಗ್ಗೆ ಉಲ್ಲೇಖಿಸಿ ನೆರೆ ರಾಷ್ಟ್ರಕ್ಕೆ ನೇರವಾಗಿ ಚಾಟಿ ಬೀಸಿದರು.

ವಿಶ್ವಸಂಸ್ಥೆಯ ಅಧಿವೇಶನವು ಇಂದು ನಗೆಪಾಟಲಿಗೆ ಗುರಿಯಾಗಿದೆ. ಮಿಲಿಟರಿಯಿಂದಲೇ ನಡೆಯುವ, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಹೆಸರುವಾಸಿಯಾಗಿರುವ, ಡ್ರಗ್ಸ್ ಮಾರಾಟ ಮತ್ತು ಅಪರಾಧ ಕೃತ್ಯಗಳಿಗೆ ಕುಖ್ಯಾತಿ ಪಡೆದಿರುವ ದೇಶವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಮೇಲೆ ಆರೋಪ ಹೊರಿಸಲು ಧೈರ್ಯ ಮಾಡಿರುವುದು ವಿಷಾದನೀಯ ಎಂದು ಹೇಳಿದರು.

ಭಯೋತ್ಪಾದನೆಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಡೀ ವಿಶ್ವವೇ ತಿಳಿದಿರುವಂತೆಯೇ ಪಾಕಿಸ್ತಾನವು ನೆರೆಹೊರೆಯ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನೇ ದಾಳವಾಗಿ ಬಳಸಿಕೊಂಡಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್, ಜಮ್ಮು ಮತ್ತು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದರು. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತ ಸರ್ಕಾರ ಆಜಾದ್ ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳುವ ಬೆದರಿಕೆಯನ್ನು ಹಾಕುತ್ತಿದೆ. ಭಾರತದ ಆಕ್ರಮಣದ ವಿರುದ್ಧ ಪಾಕಿಸ್ತಾನವು ನಿರ್ಣಾಯಕವಾಗಿ ಪ್ರತಿಕ್ರಿಯಿಸಲಿದೆ ಎಂದು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತೇನೆ. ಕಾಶ್ಮೀರದಲ್ಲಿ ಭಾರತವು 2019ರ ಆಗಸ್ಟ್ 5ರಲ್ಲಿ ತೆಗೆದುಕೊಂಡ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ