ಸಿಹಿ ತಿಂಡಿಯಲ್ಲಿ ವಿಷ ಬೆರೆಸಿ 30 ಜನರನ್ನು ಕೊಂದ ಪಾಕ್ ಅಂಗಡಿ ಮಾಲೀಕ

ಶುಕ್ರವಾರ, 6 ಮೇ 2016 (19:48 IST)
ಪಾಕಿಸ್ತಾನದ ಸಿಹಿ ತಿನಿಸು ಅಂಗಡಿ ಮಾಲೀಕ ತನ್ನ ತಿಂಡಿಯಲ್ಲಿ ಕೀಟನಾಶಕ ಬೆರೆಸಿ 30ಕ್ಕೂ ಹೆಚ್ಚು ಜನರಿಗೆ ಮಾರಣಾಂತಿಕ ವಿಷವುಣಿಸಿದ ಆರೋಪಕ್ಕೆ ಗುರಿಯಾಗಿದ್ದಾನೆ. ತನ್ನ ಅಣ್ಣನ ಮೇಲೆ ಸೇಡುತೀರಿಸಿಕೊಳ್ಳುವುದಕ್ಕೆ ಅವನು ಇಂತಹ ದುಷ್ಕೃತ್ಯಕ್ಕೆ ಇಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಕೇಂದ್ರ ಪಂಜಾಬ್ ಪ್ರಾಂತ್ಯದಲ್ಲಿನ ಕೋರ್ಟ್‌ನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಖಾಲಿದ್ ಮೆಹಮೂದ್ ಸಿಹಿ ತಿನಿಸಿನ ಅಂಗಡಿಯ ಪಾಲುದಾರನಾದ ತನ್ನ ಅಣ್ಣ ತಾರಿಖ್ ವ್ಯವಹಾರದ ವಿವಾದದಲ್ಲಿ ತನ್ನನ್ನು ಅವಮಾನ ಮಾಡಿ ನಿಂದಿಸಿದ್ದರಿಂದ ಅವನ ಮೇಲೆ ಸೇಡುತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾಗಿ ಹೇಳಿದ್ದಾನೆ. 
 
ನನಗೆ ಕೋಪ ತಡೆಯಲಾಗದೇ ಬೇಯುತ್ತಿದ್ದ ಸಿಹಿತಿಂಡಿಯೊಳಗೆ ಕೀಟನಾಶಕವನ್ನು ಬೆರೆಸಿದೆ ಎಂದು ಅವನು ಹೇಳಿದ್ದಾನೆ.  ವಿಷಯುಕ್ತ ಸಿಹಿತಿಂಡಿಯನ್ನು ಸ್ಥಳೀಯ ವ್ಯಕ್ತಿ ಖರೀದಿಸಿ ತನ್ನ ಮೊಮ್ಮಗನ ಹುಟ್ಟುಹಬ್ಬ ಆಚರಿಸುತ್ತಿದ್ದ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ತಿನ್ನಿಸಿದ್ದರು. ಮಗುವಿನ ತಂದೆ, ಅವನ 6 ಮಂದಿ ಚಿಕ್ಕಪ್ಪಂದಿರು ಮತ್ತು ಒಬ್ಬರು ಚಿಕ್ಕಮ್ಮ ಮೃತಪಟ್ಟ 30 ಮಂದಿಯ ಪೈಕಿ ಸೇರಿದ್ದಾರೆ. ಮೃತರಲ್ಲಿ ಐವರು ಮಕ್ಕಳು ಕೂಡ ಸೇರಿದ್ದಾರೆ. 

ವೆಬ್ದುನಿಯಾವನ್ನು ಓದಿ