ಕನಕಪುರ: ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಅವರು ಪಕ್ಷಕ್ಕೆ ಹೆಚ್ಚು ಶಕ್ತಿ ನೀಡಿದ್ದಾರೆ. ಅವರಿಗೆ ಉನ್ನತರ ಸ್ಥಾನ ಸಿಗಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರ ಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಿಜ್ಜಹಳ್ಳಿಯಲ್ಲಿ ಭಾನುವಾರ ನಡೆದ ಇಷ್ಟಲಿಂಗ ಪೂಜೆ, ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಗ್ರಾಮದ ಸಿದ್ದೇಶ್ವರ ಬೆಟ್ಟಕ್ಕೆ ನಿರ್ಮಿಸಿರುವ ಮೆಟ್ಟಿಲು ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಮತ್ತು ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಪಕ್ಷ ಜಯ ಗಳಿಸಿದ ಬಳಿಕ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಸಮಾಲೋಚನೆ ನಡೆಸಿ ಮಾಡಿಕೊಂಡ ಒಡಂಬಡಿಕೆಯಂತೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಆ ಒಡಂಬಡಿಕೆ ಏನೆಂಬುದು ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಮಾತ್ರ ಗೊತ್ತಿದೆ. ಆ ಒಡಂಬಡಿಕೆಯ ಹಾಗೇ ನಡೆದುಕೊಂಡರೆ ಗೌರವ ಬರುತ್ತದೆ ಎಂದರು.
ರಾಜ್ಯದಲ್ಲಿ ನಾಯಕತ್ವದ ಕುರಿತು ಕಾಂಗ್ರೆಸ್ ನಾಯಕರೇ ಮಾತನಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರೇ ಸ್ಪಷ್ಟಪಡಿಸಬೇಕು