ಇರಾನ್ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ : ಯುನೆಸ್ ಪನಾಹಿ
ಸೋಮವಾರ, 27 ಫೆಬ್ರವರಿ 2023 (11:49 IST)
ಟೆಹ್ರಾನ್ : ಹಿಜಬ್ ವಿರೋಧಿಸಿ ವ್ಯಾಪಕ ಪ್ರತಿಭಟನೆಗಳಿಂದ ತತ್ತರಿಸಿಹೋಗಿರುವ ಇರಾನ್ ದೇಶದಲ್ಲಿ ಇದೀಗ ಮತ್ತೊಂದು ವಿವಾದ ಭುಗಿಲೆದ್ದಿದೆ.
ಹೆಣ್ಣುಮಕ್ಕಳ ಶಿಕ್ಷಣ ಸ್ಥಗಿತಗೊಳಿಸುವ ಉದ್ದೇಶದಿಂದ ಪವಿತ್ರ ನಗರವಾದ ಕೋಮ್ನಲ್ಲಿ ಕೆಲ ಕಿಡಿಗೇಡಿಗಳು ಶಾಲಾ ಮಕ್ಕಳಿಗೆ ವಿಷ ಉಣಿಸುತ್ತಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವರು ಗಂಭೀರ ಆರೋಪ ಮಾಡಿದ್ದಾರೆ.
2022ರ ನವೆಂಬರ್ ಅಂತ್ಯದ ವೇಳೆಗೆ ಟೆಹ್ರಾನ್ನ ದಕ್ಷಿಣದ ಕೋಮ್ನಲ್ಲಿ ಶಾಲಾ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದೆ. ಮಕ್ಕಳ ಉಸಿರಾಟದಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾಗಿದ್ದು, ಈಗ ಆರೋಗ್ಯ ಸಚಿವ ಯುನೆಸ್ ಪನಾಹಿ, ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಈ ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಕೋಮ್ ನಗರದ ಶಾಲೆಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿಷಪ್ರಾಶನ ಮಾಡಿಸಿರುವುದು ಕಂಡುಬಂದನಂತರ ಎಲ್ಲಾ ಶಾಲೆಗಳನ್ನು ಮುಚ್ಚಬೇಕೆಂಬ ಒತ್ತಾಯ ಕೇಳಿಬಂದಿದೆ. ಅದರಲ್ಲೂ ಬಾಲಕಿಯರ ಶಾಲೆಗಳನ್ನು ಮುಚ್ಚಲೇಬೇಕೆಂದು ಕೆಲವರು ಪಟ್ಟುಹಿಡಿದಿದ್ದಾರೆ ಎಂದು ಸಚಿವರು ಹೇಳಿದ್ದಾರೆ.