ಕೊಲಂಬೋ : ಅತ್ಯಂತ ತೀವ್ರ ಮಟ್ಟದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ತಪ್ಪಿಗೆ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಕ್ಷಮೆ ಕೇಳಿದ್ದಾರೆ. ಈ ತಪ್ಪನ್ನು ಸರಿ ಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಭೀಕರ ಆರ್ಥಿಕ ಸ್ಥಿತಿಯಿಂದ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಇದರ ಮಧ್ಯೆಯೇ ಸೋಮವಾರ ಹೊಸ 17 ಸದಸ್ಯರ ಕ್ಯಾಬಿನೆಟ್ ಅನ್ನು ನೇಮಿಸಿದ್ದರು. ಈ ಹೊಸ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಚರ್ಚಿಸುವಾಗ ರಾಜಪಕ್ಸೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಕಳೆದ ಎರಡೂವರೆ ವರ್ಷಗಳಲ್ಲಿ ಅತೀ ದೊಡ್ಡ ಸವಾಲುಗಳನ್ನು ಎದುರಿಸಿದ್ದೇವೆ. ಕೋವಿಡ್-19 ನೊಂದಿಗೆ ಸಾಲದ ಹೊರೆ ನಮ್ಮನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡಲು ಕಾರಣವಾಯಿತು. ನಮ್ಮ ಕಡೆಯಿಂದ ಕೆಲವು ತಪ್ಪುಗಳಾಗಿವೆ. ಅವುಗಳನ್ನು ಸರಿಪಡಿಸಬೇಕಾಗಿದೆ. ಅವುಗಳನ್ನು ಸರಿಪಡಿಸಿ, ಮುನ್ನಡೆದು, ಜನರ ವಿಶ್ವಾಸವನ್ನು ಮರಳಿ ಪಡೆಯಬೇಕು ಎಂದು ರಾಜಪಕ್ಸೆ ತಿಳಿಸಿದರು.
ಶ್ರೀಲಂಕಾ ವಿದೇಶಿ ವಿನಿಮಯಕ್ಕೆ ಹಣದ ಕೊರತೆಯನ್ನು ಎದುರಿಸುತ್ತಿದ್ದು, ಸುಮಾರು 25 ಶತಕೋಟಿ ಡಾಲರ್(1.90 ಲಕ್ಷ ಕೋಟಿ ರೂ.)ಗಳಷ್ಟು ಮರುಪಾವತಿಯೂ ಬಾಕಿ ಇದೆ.