ಸಿಂಗಾಪುರ : ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಇದೀಗ ಸೌದಿ ಏರ್ಲೈನ್ಸ್ ಮೂಲಕ ಸಿಂಗಾಪುರಕ್ಕೆ ತೆರಳಿದ್ದಾರೆ.
ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿನ ಜನರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ರಾಜಪಕ್ಸೆ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಅಧಿಕಾರದಿಂದ ಕೆಳಗಿಳಿಯುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಶನಿವಾರ ಅವರ ಅಧ್ಯಕ್ಷೀಯ ಭವನಕ್ಕೆ ಮುತ್ತಿಗೆ ಹಾಕಿ, ಅಲ್ಲೇ ಠಿಕಾಣಿ ಹೂಡಿದ್ದರು.
ಈ ಹಿನ್ನೆಲೆಯಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಬಂದ ರಾಜಪಕ್ಸೆ ಬುಧವಾರ ಬೆಳಗ್ಗೆ ಶ್ರೀಲಂಕಾದಿಂದ ಪತ್ನಿ ಹಾಗೂ ಇಬ್ಬರು ಅಂಗರಕ್ಷಕರೊಂದಿಗೆ ಮಾಲ್ಡೀವ್ಸ್ಗೆ ತೆರಳಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ಪೀಕರ್ ಮೊಹಮ್ಮದ್ ನಶೀದ್ ಸ್ವಾಗತಿಸಿದರು. ರಾಜಪಕ್ಸೆ ತಮ್ಮ ರಾಜೀನಾಮೆಯನ್ನು ಹಸ್ತಾಂತರಿಸಬೇಕಿದ್ದ ದಿನವೇ ದೇಶದಿಂದ ಪಲಾಯನ ಮಾಡಿದ್ದರು.
ಬುಧವಾರ ರಾತ್ರಿಯೇ ಸಿಂಗಾಪುರಕ್ಕೆ ತೆರಳಬೇಕಿತ್ತು. ಆದರೆ ಭದ್ರತೆಯ ಕಾರಣದಿಂದಾಗಿ ಅವರು ಪಲಾಯನ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಸಿಂಗಾಪುರಕ್ಕೆ ತರಳಿರುವ ಅವರು ಸದ್ಯಕ್ಕೆ ಇಲ್ಲೇ ವಾಸಿಸುವ ನಿರೀಕ್ಷೆಯಿದೆ.