ಈ ಸುದ್ದಿ ಓದಿದ ಬಳಿಕ ಫೇಸ್ಬುಕ್ ಪೋಸ್ಟ್ ಹಾಕುವ ಮುನ್ನ 100 ಬಾರಿ ಯೋಚಿಸುತ್ತಿರಿ..?
ಶನಿವಾರ, 1 ಏಪ್ರಿಲ್ 2017 (11:59 IST)
ಫೇಸ್ಬುಕ್`ನಲ್ಲಿ ಯಾರ ವಿರುದ್ಧವಾದರೂ ಪೋಸ್ಟ್ ಹಾಕುವ ಮುನ್ನ ಎರಡು ಬಾರಿ ಯೋಚಿಸಿ. ಇಲ್ಲವಾದರೆ ನಿಮಗೂ ಸಂಕಷ್ಟ ಬಂದುಬಿಡಬಹುದು. ನನ್ನ ಮಗಳನ್ನ ಕೊಂದಿದ್ದಾಳೆಂದು ಸ್ನೇಹಿತೆ ವಿರುದ್ಧ ಫೇಸ್ಬುಕ್`ನಲ್ಲಿ ತಪ್ಪು ಪೋಸ್ಟ್ ಮಾಡಿದ್ದ ಜಾಕ್ವೆಲಿನ್ ಹಮ್ಮಂಡ್ ಎಂಬ ಮಹಿಳೆಗೆ ಅಮೆರಿಕದ ನಾರ್ತ್ ಕರೋಲಿನಾ ಕೋರ್ಟ್ 5 ಲಕ್ಷ ಡಾಲರ್ (3 ಕೋಟಿಗೂ ಅಧಿಕ) ದಂಡ ವಿಧಿಸಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಆಶ್ವಿಲ್ಲೆ ಮೂಲದ ಜಾಕ್ವೆಲಿನ್ ಹಮ್ಮೊಂಡ್ ಎಂಬ ಮಹಿಳೆ 2015ರಲ್ಲಿ ತನ್ನ ಸ್ನೇಹಿತೆ ಡವ್ನ್ ಡೈಯಲ್ ವಿರುದ್ಧ ಫೇಸ್ಬುಕ್ ಪೋಸ್ಟ್ ಹಾಕಿದ್ದಳು. ನನಗೂ ಆಕೆಯ ಮಗನ ಸಾವಿಗೂ ಯಾವುದೇ ಸಂಬಂಧವಿಲ್ಲ. ಭಾವನಾತ್ಮಕವಾಗಿ ಜಾಕ್ವೆಲಿನ್ ಹತಾಶೆಯಿಂದ ಈ ಪೋಸ್ಟ್ ಹಾಕಿದ್ದಾಳೆ ಎಂದು ವಾದಿಸಿದ್ದ ಡೈಯಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದೀಗ, ಸುದೀರ್ಘ ವಿಚಾರಣೆ ನಡೆದು ಜಾಕ್ವೆಲಿನ್ ಹಾಕಿದ್ದ ಪೋಸ್ಟ್ ತಪ್ಪೆಂದು ಸಾಬೀತಾಗಿದ್ದು, ಕೋರ್ಟ್`ನಿಂದ ದಂಡ ವಿಧಿಸಲಾಗಿದೆ.
ರೇಡಿಯೋ ಸ್ಟೇಶನ್ನಿನಲ್ಲಿ ಕೆಲಸ ಮಾಡುತ್ತಿದ್ದ ಡೈಯಲ್ ಮತ್ತು ಹಮ್ಮೊಂಡ್ ಸಂಬಂಧ ಕೆಲ ವರ್ಷಗಳ ಹಿಂದೆ ಮುರಿಬಿದ್ದಿತ್ತು. ಇಬ್ಬರ ನಡುವೆ ಪರಸ್ಪರ ದ್ವೇಷದ ಹೊಗೆಯಾಡುತ್ತಿತ್ತು ಎಂದು ತಿಳಿದುಬಂದಿದೆ.