ಆಗಂತುಕನ ಅಟ್ಟಹಾಸ; ಮಸೀದಿಗೆ ನುಗ್ಗಿ ಮಾರಣಹೋಮ

ಸೋಮವಾರ, 30 ಜನವರಿ 2017 (09:41 IST)
ಏಕಾಏಕಿ ಮಸೀದಿಯೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಯದ್ವಾತದ್ವಾ ಫೈರಿಂಗ್ ನಡೆಸಿ 5 ಜನರನ್ನು ಬಲಿ ಪಡೆದ ಕರಾಳ ಘಟನೆ ಕೆನಡಾದ ಕ್ಯುಬೆಕ್ ಸಿಟಿಯಲ್ಲಿ ನಡೆದಿದೆ.

 
ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆ ( ಭಾರತೀಯ ಕಾಲಮಾನ ಬೆಳಗಿನಜಾವ 1.30 ಗಂಟೆ)ಗೆ 
ಎಕೆ 47 ಹಿಡಿದ ವ್ಯಕ್ತಿಯೋರ್ವ ನುಗ್ಗಿ ಪ್ರಾರ್ಥನಾನಿರತರಾಗಿದ್ದ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಮಸೀದಿಯಲ್ಲಿದ್ದರು ಎಂದು ತಿಳಿದುಬಂದಿದೆ. 
 
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.
 
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಸ್ಲಿಂ ರಾಷ್ಟ್ರಗಳ ನಾಗರಿಕರ ಅಮೆರಿಕ ಪ್ರವೇಶ ನಿರ್ಬಂಧಿಸುವ ವಿವಾದಾತ್ಮಕ ಯೋಜನೆಯನ್ನು ವಿರೋಧಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡಿ ಕೆನಡಾದಲ್ಲಿ ಮುಸ್ಲಿಂ ಸಮುದಾಯದವರಿಗೆ ಸ್ವಾಗತವಿದೆ ಎಂದಿದ್ದರು. ಇದರ ಬೆನ್ನಲ್ಲೇ ಈ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 
 
ಕೆನಡಾದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. 2015ರ ಜೂನ್‌ನಲ್ಲಿ ಪ್ರಾರ್ಥನಾ ಮಂದಿರದ ಮುಂದೆ ಹಂದಿಯ ತಲೆಯನ್ನು ಹಾಕುವುದರ ಮೂಲಕ ಜನರನ್ನು ಉದ್ರಿಕ್ತಗೊಳಿಸುವ ಪ್ರಯತ್ನ ನಡೆಯಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ