ಕಪ್ಪು ಸಮುದ್ರದಲ್ಲಿ ರಷ್ಯಾ ಗಸ್ತುಪಡೆಯ 2 ಹಡಗು ಹೊಡೆದುರುಳಿಸಿದ ಉಕ್ರೇನ್!
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ಎರಡು ತಿಂಗಳು ಪೂರ್ಣಗೊಂಡಿದ್ದು, ಹಂತ ಹಂತವಾಗಿ ತಿರುಗೇಟು ನೀಡುತ್ತಿರುವ ಉಕ್ರೇನ್ ಇದೀಗ ಕಪ್ಪು ಸಮುದ್ರದಲ್ಲಿ ರಷ್ಯಾದ ಗಸ್ತು ಪಡೆಯ 2 ಹಡಗುಗಳನ್ನು ಹೊಡೆದುರುಳಿಸಿದೆ.
ಸ್ನೇಕ್ ದ್ವೀಪದ ಬಳಿ ರಷ್ಯಾದ 2 ಗಸ್ತು ಹಡಗುಗಳನ್ನು ಉಕ್ರೇನ್ ನ ಶಸ್ತ್ರಸಜ್ಜಿತ ಡ್ರೋಣ್ ಗಳು ಹೊಡೆದುರಳಿಸಿವೆ ಎಂದು ಉಕ್ರೇನ್ ಸೇನೆ ಹೇಳಿಕೊಂಡಿದೆ.
ಮಾಸ್ಕೊದ ಈ ಹಡಗುಗಳನ್ನು ಶರಣಾಗುವಂತೆ ಉಕ್ರೇನ್ ಸೈನಿಕರು ಹಲವಾರು ಸೂಚಿಸಿದರೂ ಕೇಳದ ಕಾರಣ ಬಾಂಬ್ ದಾಳಿ ನಡೆಸಿ ಧ್ವಂಸಗೊಳಿಸಲಾಯಿತು.
ರಷ್ಯಾದ ಎರಡು ಗಸ್ತು ಹಡಗುಗಳನ್ನು ಧ್ವಂಸಗೊಳಿಸಿದ್ದನ್ನು ಉಕ್ರೇನ್ ರಕ್ಷಣಾ ಸಚಿವಾಲಯ ದೃಢಪಡಿಸಿದ್ದು ಅಲ್ಲದೇ ವೀಡಿಯೋ ಬಿಡುಗಡೆ ಮಾಡಿದೆ.
ಈ ಹಡಗಿನಲ್ಲಿ 3ರಿಂದ 20 ಸಿಬ್ಬಂದಿ ಇರುವುದು ಸಾಮಾನ್ಯ. ಆದರೆ ಈ ಹಡಗಿನಲ್ಲಿ ನಿರ್ದಿಷ್ಟವಾಗಿ ಎಷ್ಟು ಜನರು ಇದ್ದರು ಎಂಬುದು ತಿಳಿದು ಬಂದಿಲ್ಲ. ಅಲ್ಲದೇ ಸಾಕಷ್ಟು ಶಸ್ತ್ರಾಸ್ತ್ರಗಳು ಸಂಗ್ರಹದಲ್ಲಿ ಇರುತ್ತವೆ ಎಂದು ಉಕ್ರೇನ್ ಸೇನೆ ತಿಳಿಸಿದೆ.
ಇತ್ತೀಚೆಗಷ್ಟೇ ಉಕ್ರೇನ್ ಸೇನೆ ರಷ್ಯಾದ ಅತ್ಯಾಧುನಿಕ ಹಾಗೂ ಅತ್ಯಂತ ಸಮರ್ಥ ಯುದ್ಧ ನೌಕೆಯನ್ನು ಹೊಡೆದುರುಳಿಸಿತ್ತು.