ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಭೇಟಿಯಾಗುವ ಕೆಲವೇ ಗಂಟೆಗಳ ಮೊದಲು ಈ ಮಹತ್ವದ ಘೋಷಣೆ ಹೊರಬಿದ್ದಿದೆ. ಅಮೆರಿಕ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಮೂಲದ ಸಲಾವುದ್ದೀನ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿರುವುದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ಪ್ರಮುಖ ಗೆಲುವು ಎಂದು ಹೇಳಲಾಗುತ್ತಿದೆ.
ಸಲಾವುದ್ದೀನ್ ಪಾಕಿಸ್ತಾನದಲ್ಲಿ ಇದ್ದುಕೊಂಡೇ ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಮತ್ತು ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿದ್ದಾನೆ. ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರಕ್ಕೆ ಅಡ್ಡಿ ಪಡಿಸುತ್ತಿರುವ ಈತನ ಹೆಸರು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲೂ ಇದೆ. ಕಾಶ್ಮೀರದ ಯುವಕರನ್ನು ಆತ್ಮಾಹುತಿ ದಾಳಿಯ ದಾಳಗಳನ್ನಾಗಿ ಬಳಸಿಕೊಂಡು ಕಣಿವೆ ರಾಜ್ಯವನ್ನು ಸ್ಮಶಾನ ಮಾಡುವುದಾಗಿ’ ಸಲಾವುದೀನ್ ಕಳೆದ ವರ್ಷ ಭಾರತಕ್ಕೆ ಬೆದರಿಕೆ ಒಡ್ಡಿದ್ದ. ಇದೀಗ ಸಲಾವುದೀನ್ ಹೆಸರು ಅಮೆರಿಕದ ಸರ್ಕಾರಿ ಕಡತಕ್ಕೆ ಸೇರ್ಪಡೆಯಾಗಿದ್ದು ಅಮೆರಿಕ ಆತನ ವಿರುದ್ಧ ಆರ್ಥಿಕ ದಿಗ್ಭಂದನೆ ಸೇರಿದಂತೆ ಎಲ್ಲ ರೀತಿಯ ನಿರ್ಬಂಧ ಹೇರಿದೆ.