ವಿಮಾನ ಹತ್ತಿದ್ದು 191 ಮಂದಿ ಇಳಿದಾಗ 192 ಪ್ರಯಾಣಿಕರಿದ್ದರು..!
ಸೋಮವಾರ, 31 ಜುಲೈ 2017 (14:17 IST)
ಕೊಲಂಬಿಯಾ ರಾಜಧಾನಿ ಬೊಗೋಟಾದಿಂದ ಹೊರಟ ವಿಮಾನದಲ್ಲಿ 191 ಮಂದಿ ಪ್ರಯಾಣಿಕರು ಹತ್ತಿದ್ದರು. ಮ್ಯಾಂಚೆಸ್ಟರ್`ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದಾಗ 192 ಮಂದಿ ಇದ್ದರು. ಅಂದಹಾಗೆ, ವಿಮಾನದಲ್ಲಿ ಆದ ಮ್ಯಾಜಿಕ್ ಏನು ಗೊತ್ತಾ..? 38 ವರ್ಷದ ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಜುಲೈ 26ರಂದು ಬೊಗೋಟಾದಿಂದ ಜರ್ಮನಿಗೆ ತೆರಳುತ್ತಿದ್ದ ವಿಮಾನ 39000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಡೆಸಿಸ್ಲೇವಾ ಎಂಬ 38 ವರ್ಷದ ಮಹಿಳೆಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಈ ಸಂದರ್ಭ ವಿಮಾನವನ್ನ ತುರ್ತು ಭೂಸ್ಪರ್ಶ ಮಾಡಲು ನಿರ್ಧರಿಸಿದ ಪೈಲಟ್ ವಿಮಾನವನ್ನ ಮ್ಯಾಂಚೆಸ್ಟರ್ ಕಡೆಗೆ ತಿರುಗಿಸಿದ್ದ. ಅಷ್ಟರಲ್ಲಿ ವಿಮಾನದಲ್ಲಿದ್ದ ಮೂವರು ವೈದ್ಯರು ಮಹಿಳೆಯ ನೆರವಿಗೆ ಬಂದಿದ್ದಾರೆ. ಈ ಸಂದರ್ಭ ವಿಮಾನ ಸಿಬ್ಬಂದಿಯ ಸೀಟ್`ನಲ್ಲಿದ್ದ ಪ್ರಯಾಣಿಕರನ್ನ ಮುಂದಕ್ಕೆ ಕಳುಹಿಸಿ ಅಲ್ಲಿಯೇ ಪರದೆ ಸರಿಸಿ ಡೆಲಿವರಿಗೆ ಅನುವು ಮಾಡಿಕೊಟ್ಟಿದ್ದಾರೆ. ವಿಮಾನ ಮ್ಯಾಂಚೆಸ್ಟರ್ ತಲುಪುವ ಹೊತ್ತಿಗೆ ಮಹಿಳೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಬಳಿಕ ಮ್ಯಾಚೆಸ್ಟರ್`ನಲ್ಲಿ ಮಹಿಳೆ ಮತ್ತು ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಧ್ಯಮಗಳ ಜೊತೆ ಮಾತನಾಡಿದ ವಿಮಾನದ ಕ್ಯಾಪ್ಟನ್, ಸಿಬ್ಬಂದಿ ಕಾರ್ಯವೈಖರಿಯನ್ನ ಶ್ಲಾಘಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ