ಮಹಾಯುದ್ಧದ ಎಚ್ಚರಿಕೆ ನೀಡಿದ ರಷ್ಯಾ!?

ಮಂಗಳವಾರ, 26 ಏಪ್ರಿಲ್ 2022 (15:23 IST)
ಮಾಸ್ಕೋ : ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಇದೀಗ ಮತ್ತೊಂದು ಅಪಾಯದ ಸೂಚನೆ ನೀಡಿದೆ.
 
ಮೂರೇ ದಿನಕ್ಕೆ ಉಕ್ರೇನ್ ಮುಗಿಸಲು ಹೋದ ರಷ್ಯಾ ತಿಂಗಳು ಕಳೆದರೂ ಉಕ್ರೇನ್ ಕೈವಶ ಮಾಡಲು ಸಾಧ್ಯವಾಗಿಲ್ಲ. ಉಕ್ರೇನ್ ಬಹುತೇಕ ಧ್ವಂಸಗೊಂಡಿದ್ದರೂ ಹೋರಾಟ ನಿಂತಿಲ್ಲ. ಇತ್ತ ಹಲವು ದೇಶಗಳು ಉಕ್ರೇನ್ಗೆ ಬೆಂಬಲ ನೀಡಿದೆ.

ಇದರ ಬೆನ್ನಲ್ಲೇ ಆಕ್ರೋಶಗೊಂಡಿರುವ ರಷ್ಯಾ, ಇದೀಗ ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದೆ. ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೋ ವಿಶ್ವ ಮಹಾ ಯುದ್ಧದ ಸೂಚನೆ ನೀಡಿದ್ದಾರೆ. ರಷ್ಯಾ ಸುದ್ದಿ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಸರ್ಗೆ ಲಾವ್ರೋ ಈ ಸ್ಫೋಟಕ ಮಾತುಗಳನ್ನಾಡಿದ್ದಾರೆ.

ಉಕ್ರೇನ್ ಜೊತೆ ಶಾಂತಿ ಮಾತುಕತೆ ಮುಂದುವರಿಯಲಿದೆ. ಆದರೆ ಮೂರನೇ ಮಹಾಯುದ್ಧದ ನೈಜ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಾತುಕತೆ ಹಾಗೂ ಸಂಧಾನಗಳಿಗೆ ಒಂದು ಮಿತಿ ಇದೆ. ಉತ್ತಮ ಸಂಬಂಧವಿಲ್ಲದಿದ್ದರೆ ಮಾತುಕತೆಗೆ ಅರ್ಥವೂ ಇರುವುದಿಲ್ಲ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ ಎಂದು ಲಾವ್ರೋ ಹೇಳಿದ್ದಾರೆ.

ಈ ಮೂಲಕ ತನ್ನ ದಾಳಿಗೆ ಜಗ್ಗದ ಉಕ್ರೇನ್ ಮೇಲೆ ಇದೀಗ 3ನೇ ಮಹಾಯುದ್ಧ ಅಸ್ತ್ರ ಪ್ರಯೋಗಿಸಲು ರಷ್ಯಾ ಮುಂದಾಗಿದೆ. ಇತ್ತ ಉಕ್ರೇನ್ ಬೆಂಬಲಿಸುತ್ತಿರುವ ದೇಶಗಳಿಗೂ ರಷ್ಯಾ ಪರೋಕ್ಷ ಎಚ್ಚರಿಕೆಯನ್ನು ನೀಡಿದೆ.

ಉಕ್ರೇನ್ ಮೇಲಿನ ದಾಳಿಯನ್ನು ತೀವ್ರಗೊಳಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದ ರಷ್ಯಾ, ಒಂದೇ ದಿನ ಉಕ್ರೇನ್ನ 1001 ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಉಕ್ರೇನ್ನ ವಿವಿಧ ನಗರಗಳು, ಆಯಕಟ್ಟಿನ ಸ್ಥಳಗಳು, ರಷ್ಯಾದ ಮೇಲೆ ದಾಳಿ ನಡೆಸುತ್ತಿರುವ ಸ್ಥಳಗಳು ಸೇರಿದಂತೆ ಒಟ್ಟು 1001 ಸ್ಥಳಗಳ ಮೇಲೆ ಇಡೀ ದಿನ ದಾಳಿ ನಡೆಸಲಾಯಿತು ಎಂದು ರಷ್ಯಾ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ