ನವದೆಹಲಿ : ಭಾರತದಿಂದ ಗೋಧಿಯನ್ನು ಖರೀದಿಸಲು ಈಜಿಪ್ಟ್ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈಜಿಪ್ಟ್ ರಷ್ಯಾ ಮತ್ತು ಉಕ್ರೇನ್ನಿಂದ ಗೋಧಿಯನ್ನು ಆಮದು ಮಾಡುತ್ತಿತ್ತು. ಆದರೆ ಯುದ್ಧದಿಂದಾಗಿ ಈಜಿಪ್ಟ್ ಈಗ ಭಾರತದಿಂದ 3 ಮಿಲಿಯನ್ ಟನ್ ಗೋಧಿ ಖರೀದಿಸಲು ಮುಂದಾಗಿದೆ.
ಈಜಿಪ್ಟ್ ದೇಶದ ಕೃಷಿ ಅಧಿಕಾರಿಗಳು ಭಾರತದ ವಿವಿಧ ಸಂಸ್ಕರಣಾ ಘಟಕ, ಬಂದರುಗಳಿಗೆ ಭೇಟಿ ನೀಡಿದ್ದರು. ಜೊತೆಗೆ ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್ನ ಕೃಷಿ ಭೂಮಿಗಳನ್ನು ವೀಕ್ಷಣೆ ಮಾಡಿದ್ದರು.
ಈಗ ಈಜಿಪ್ಟ್ಗೆ ಉತ್ತಮ ಗುಣಮಟ್ಟದ ಗೋಧಿಯನ್ನು ರಫ್ತು ಮಾಡಲಿದ್ದೇವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಹಿನ್ನೆಯಲ್ಲಿ ಗೋಧಿ ಆಮದಿಗಾಗಿ ಈಜಿಪ್ಟ್ ಅಧಿಕಾರಿಗಳು ಬೇರೆ ಬೇರೆ ದೇಶಗಳನ್ನು ಸಂಪರ್ಕಿಸಿತ್ತು. ಕಳೆದ ತಿಂಗಳು ದುಬೈನಲ್ಲಿ ಪಿಯೂಶ್ ಗೋಯಲ್ ಈಜಿಪ್ಟ್ ಸರ್ಕಾರದ ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ಸಚಿವ ಡಾ. ಹಾಲಾ ಎಲ್-ಸೈದ್ ಅವರನ್ನು ಭೇಟಿ ಮಾಡಿದ್ದರು.
ಈ ವೇಳೆ ಈಜಿಪ್ಟ್ನ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಗೋಧಿಯನ್ನು ಪೂರೈಸಲು ಭಾರತದ ಸಿದ್ಧವಾಗಿದೆ ಎಂದು ತಿಳಿಸಿದ್ದರು.
2021 ರಲ್ಲಿ ಈಜಿಪ್ಟ್ 6.1 ದಶಲಕ್ಷ ಟನ್ ಗೋಧಿಯನ್ನು ಆಮದು ಮಾಡಿಕೊಂಡಿದೆ. ಭಾರತವು ಈಜಿಪ್ಟ್ಗೆ ಗೋಧಿಯನ್ನು ರಫ್ತು ಮಾಡಬಹುದಾದ ಮಾನ್ಯತೆ ಪಡೆದ ದೇಶಗಳ ಪಟ್ಟಿಯಲ್ಲಿ ಇಲ್ಲಿಯವರೆಗೆ ಸ್ಥಾನ ಪಡೆದಿರಲಿಲ್ಲ.
ಭಾರತದಿಂದ ಆಹಾರ ಉತ್ಪನ್ನಗಳು ರಫ್ತು ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗ ಆಹಾರ ಪರೀಕ್ಷೆ ಮಾಡುವ ಲ್ಯಾಬ್ಗಳ ಗುಣಮಟ್ಟವನ್ನು ಹೆಚ್ಚಿಸುತ್ತಿದೆ.
ರೈಲ್ವೇ ಮತ್ತು ವಾಣಿಜ್ಯ ಸಚಿವಾಲಯ ಹೆಚ್ಚುವರಿ ಬೋಗಿಗಳನ್ನು ಸೇರಿಸಿ ವೇಗವಾಗಿ ಸರಕು ಬಂದರು ತಲುಪವಂತೆ ಮಾಡಲು ಈಗ ಕೆಲಸ ಮಾಡುತ್ತಿದೆ. ಗೋಧಿಯನ್ನು ತ್ವರಿತವಾಗಿ ರಫ್ತು ಮಾಡಲು ಬಂದರು ಅಧಿಕಾರಿಗಳಿಗೆ ಸೂಚಿಸಲಾಗಿದೆ.