ಕೋಲ್ಕತ್ತಾ ವಿರುದ್ಧ ಗೆದ್ದು ಪ್ಲೇಆಫ್ಸ್ ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್

ಭಾನುವಾರ, 14 ಮೇ 2017 (09:15 IST)
ಕೋಲ್ಕತ್ತಾವನ್ನ 9 ರನ್`ಗಳಿಂದ ಮಣಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸುವ ಮೂಲಕ 20 ಅಂಕಗಳೊಂದಿಗೆ ಪ್ಲೇಆಫ್ಸ್`ಗೆ ಮೊದಲ ತಂಡವಾಗಿ ಎಂಟ್ರಿ ಕೊಟ್ಟಿದೆ.  ಇಂದು ನಡೆಯಲಿರುವ ಪುಣೆ ಸೂಪರ್ ಜಾಯಿಂಟ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ಇನ್ನೆರಡು ತಂಡಗಳ ಭವಿಷ್ಯ ನಿರ್ಧರಿಸಲಿದೆ.

ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈಗೆ ಬ್ಯಾಟಿಂಗ್ ಆಹ್ವಾನ ನೀಡಿತು. 6 ಆಟಗಾರರ ಬದಲಾವಣೆಯೊಂದಿಗೆ ಮೈದಾನಕ್ಕಿಳಿದಿದ್ದ ಮುಂಬೈ ನಿಧಾನಗತಿಯ ಬ್ಯಾಟಿಂಗ್ ನಡೆಸಿತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ತಾಳ್ಮೆಯ ಬ್ಯಾಟಿಂಗ್ ಮಾಡಿದ ಸೌರಭ್ ತಿವಾರಿ 52 ರನ್ ಸಿಡಿಸಿ ರನೌಟ್ ಆದರು. ಆ ಬಳಿಕ ಉತ್ತಮ ಬ್ಯಾಟಿಂಗ್ ಮಾಡಿದ ಅಂಬಾಟಿ ರಾಯುಡು ಅರ್ಧ ಶತಕ ಸಿಡಿಸಿದರು. ಐಪಿಎಲ್`ನಲ್ಲಿ ಇದುವರೆಗೂ ಬೆಂಚ್ ಕಾಯುತ್ತಿದ್ದ ರಾಯುಡು ಸಿಕ್ಕ ಅವಕಾಶವನ್ನ ಸರಿಯಾಗಿಯೇ ಬಳಸಿಕೊಂಡರು. 37 ಎಸೆತಗಳಲ್ಲಿ  6 ಬೌಂಡರಿ, 3 ಸಿಕ್ಸರ್ ಸಹಿತ 63 ರನ್ ಸಿಡಿಸಿದರು. ಅಂತಿಮವಾಗಿ ಮುಂಬೈ 173 ರನ್ ಗಳಿಸಿತು.

ಚೇಸ್ ಮಾಡಬಹುದಾದ ಮೊತ್ತವನ್ನ ಬೆನ್ನಟ್ಟಿದ ಕೋಲ್ಕತ್ತಾ ಬ್ಯಾಟ್ಸ್`ಮನ್`ಗಳು ಮುಂಬೈ ದಾಳಿಯನ್ನ ಎದುರಿಸಲು ಸಾಧ್ಯವಾಗಲಿಲ್ಲ. ನರೈನ್ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಕ್ರಿಸ್ ಲಿನ್, ಗಂಭೀರ್ ಅಬ್ಬರ ಸ್ವಲ್ಪ ಸಮಯದಲ್ಲೇ ತಣ್ಣಗಾಯಿತು. ಉತ್ತಪ್ಪ 2 ರನ್`ಗೆ ಪೆವಿಲಿಯನ್ ಸೇರಿದರು. ಅಂತಿಮವಾಗಿ ಮನೀಶ್ ಪಾಮಡೆ ಗ್ರ್ಯಾಂಡ್ ಹೋಮ್ ಹೋರಾಟ ಫಲ ನೀಡಲಿಲ್ಲ. ಕೊನೆಯ ಓವರಿನಲ್ಲಿ 14 ರನ್ ಬೇಕಿದ್ದಾಗ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ, ಕೋಲ್ಕತ್ತಾ ಬಾಲಂಗೋಚಿಗಳನ್ನ ಕಟ್ಟಿ ಹಾಕಿ ಮುಂಬೈಗೆ 9 ರನ್`ಗಳ ಗೆಲುವು ತಂದಿಟ್ಟರು.

ಈ ಗೆಲುವಿನೊಂದಿಗೆ ಮುಂಬೈ 20 ಅಂಕಗಳೊಂದಿಗೆ ಫ್ಲೇಆಫ್ಸ್ ಅಂಗ್ರಸ್ಥಾನಕ್ಕೆ ಏರಿದೆ. ಕೋಲ್ಕತ್ತಾಸಹ 16 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಇಂದು ನಡೆಯಲಿರುವ ಪಂಜಾಬ್ ಮತ್ತು ಪುಣೆ ಫಲಿತಾಂಶದ ಬಳಿಕ ಕೋಲ್ಕತ್ತಾ ಸ್ಥಾನ ಬದಲಾಗಬಹುದು. ಆದರೆ, 3 ಅಥವಾ 4ನೇ ತಂಡವಾಗಿ ಪ್ಲೇಆಫ್ಸ್ ಆಡುವುದು ಖಚಿತ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ