ವೇತನ ಹೆಚ್ಚಳ ಹಾಗೂ ಇತರ ಸಮಸ್ಯೆಗಳ ಬೇಡಿಕೆ ಈಡೇರಿಕೆಗೆ ಇಂದಿನಿಂದ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದ ಏರ್ ಇಂಡಿಯಾ ಪೈಲಟ್‌ಗಳು, ಸಚಿವ ವಯಲಾರ್ ರವಿ ಅವರ ಭರವಸೆಯ ಹಿನ್ನೆಲೆಯಲ್ಲಿ ಮಾರ್ಚ್ 15ರ ವರೆಗೆ ಮುಂದೂಡಲು ನಿರ್ಧರಿಸಿದ್ದಾರೆ ಎಂದು ಏರಿಂಡಿಯಾ ಮೂಲಗಳು ತಿಳಿಸಿವೆ.
ನಾಗರಿಕ ವಿಮಾನಯಾನ ಖಾತೆ ಸಚಿವರು ತೆಗೆದುಕೊಂಡ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪೈಲಟ್‌ಗಳ ಸಂಘ, ಮುಂದಿನ ತಿಂಗಳವರೆಗೆ ಕಾಯ್ದು ನೋಡಿ ಮುಷ್ಕರ ಆರಂಭಿಸುವ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದೆ.
ಇಂಡಿಯನ್ ಕಮರ್ಶಿಯಲ್ ಪೈಲಟ್ಸ್ ಅಸೋಸಿಯೇಶನ್, ಇಂಡಿಯನ್ ಏರ್‌ಲೈನ್ಸ್ ಅಸೋಸಿಯೇಶನ್‌ನೊಂದಿಗೆ ವಿಲೀನವಾಗಿದ್ದರಿಂದ, ಬೇಡಿಕೆಗಳನ್ನು ಈಡೇರದಿದ್ದಲ್ಲಿ ಮಾರ್ಚ್ 9 ರಂದು ಮುಷ್ಕರ ಆರಂಭಿಸುವುದಾಗಿ ಪ್ರಕಟಿಸಿದೆ.
ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ಸಂಸ್ಥೆಗಳಲ್ಲಿ ವೇತನ ಹಾಗೂ ಕಾರ್ಯನಿರ್ವಹಣೆಯ ಭಿನ್ನತೆಗಳಿಂದಾಗಿ ನವೆಂಬರ್ 2009ರಲ್ಲಿನ ಒಪ್ಪಂದದಂತೆ ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದೆ.
ಏರಿಂಡಿಯಾ ಸಂಘಟನೆಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಪೈಲಟ್‌ಗಳ ಮುಷ್ಕರವನ್ನು ನಿಲ್ಲಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಏರ್‌ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.