ಪ್ರತೀ ಸಿಮ್ ಕಾರ್ಡ್‌ನಿಂದ ಪ್ರತೀದಿನ ಕೇವಲ 200 ಎಸ್ಸೆಮ್ಮೆಸ್ ಸೇವೆಗಳಿಗೆ ಸೀಮಿತಗೊಳಿಸಿರುವ ಕ್ರಮವನ್ನು ಪ್ರಶ್ನಿಸಿರುವ ದೆಹಲಿ ಹೈಕೋರ್ಟ್, ಈ ಕುರಿತು ವಿವರ ಸಲ್ಲಿಸುವಂತೆ ಯುಪಿಎ ಸರ್ಕಾರಕ್ಕೆ ಆದೇಶಿಸಿದೆ.
ದಿನಕ್ಕೆ 200 ಎಸ್ಸೆಮ್ಮೆಸ್‌ಗೆ ಸೀಮಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ವಿ.ಕೆ.ಸಿಕ್ರಿ ಮತ್ತು ರಾಜೀವ್ ಸಹಾಯ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ದೂರಸಂಪರ್ಕ ಸಚಿವಾಲಯ ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ವಿವರಣೆ ಕೋರಿ ನೋಟೀಸು ಜಾರಿ ಮಾಡಿದೆ.
ಈ ಅರ್ಜಿಯ ಕುರಿತು ಎರಡು ವಾರದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿರುವ ಪೀಠ ಪ್ರಕರಣದ ವಿಚಾರಣೆಯನ್ನು ಜನವರಿ 18 ಕ್ಕೆ ಮುಂದೂಡಿದೆ.
ಅನಿಯಂತ್ರಿತ ಎಸ್ಸೆಮ್ಮೆಸ್ ಮೇಲೆ ಕಡಿವಾಣ ಹಾಕಿರುವುದನ್ನು ಪ್ರಶ್ನಿಸಿರುವ ಟಿಲಿಕಾಂ ವಾಚ್‌ಡಾಗ್ ಸೆಕ್ರೆಟರಿ ಅನಿಲ್‌ಕುಮಾರ್ ಅವರ ಮನವಿಯನ್ನು ಪೀಠ ವಿಚಾರಣೆ ನಡೆಸಲಿದೆ.