ಚೀನಾದಲ್ಲಿ 5 ಲಕ್ಷ ಉದ್ಯೋಗಿಗಳಿಗೆ ಗೇಟ್‌ಪಾಸ್

ಗುರುವಾರ, 2 ಮಾರ್ಚ್ 2017 (13:00 IST)
ಕಬ್ಬಿಣ, ಕಲ್ಲಿದ್ದಲು, ಬೃಹತ್ ಕೈಗಾರಿಕಾ ವಲಯದಲ್ಲಿ ಈ ವರ್ಷ 5 ಲಕ್ಷ ಉದ್ಯೋಗಳನ್ನು ಕಡಿತ ಮಾಡಲಾಗಿದೆ ಎಂದು ಚೀನಾ ಪ್ರಕಟಣೆಯಲ್ಲಿ ತಿಳಿಸಿದೆ. ಜಗತ್ತಿನ ದೇಶಗಳು ತಯಾರಿಸುವ ಒಟ್ಟು ಉಕ್ಕಿನ ಉತ್ಪಾದನೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಚೀನಾ ಉತ್ಪಾದಿಸುತ್ತಿದೆ. ಆದರೆ ಅಂತಾರಾಷ್ಟ್ರೀಯ ಬೇಡಿಕೆ ಕಡಿಮೆಯಾಗಿದ್ದು, ಹೆಚ್ಚುವರಿ ತಯಾರಿ ಸಾಮರ್ಥ್ಯ ಭಾರಿ ಮಟ್ಟದಲ್ಲಿ ವ್ಯರ್ಥವಾಗುತ್ತಿದೆ ಎಂದು ಹೇಳಿದೆ.
 
ದೇಶದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆ ಕುಂಠಿತವಾಗಿದ್ದು, ಹೆಚ್ಚುವರಿ ಉತ್ಪಾದನೆ ಸಾಮರ್ಥ್ಯವನ್ನು ಕಡಿಮೆ ಮಾಡಲು, ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿರುವುದಾಗಿ ತಿಳಿಸಿದೆ. ಉದ್ಯೋಗ ಕಳೆದುಕೊಂಡವರಿಗೆ  ಬದಲಿ ಉದ್ಯೋಗ ಕಲ್ಪಿಸುವುದಾಗಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಭದ್ರತಾ ಸಚಿವರು ತಿಳಿಸಿದ್ದಾರೆ.
 
ಕಳೆದ ವರ್ಷ ಚೀನಾ ನಗರ ನಿವಾಸಿಗಳಿಗೆ 1.314 ಕೋಟಿ ಉದ್ಯೋಗಗಳನ್ನು ಕಲ್ಪಿಸಿತ್ತು. ನಗರದಲ್ಲಿ ನಿರುದ್ಯೋಗದ ಪ್ರಮಾಣ ಶೇ.4.02ರಷ್ಟು ದಾಖಲಾಗಿದೆ. ಮಂದಗತಿಯ ಆರ್ಥಿಕ ಬೆಳವಣಿಗೆಯಲ್ಲೂ ನಿರೀಕ್ಷೆಗಿಂತ ನಿರುದ್ಯೋಗದ ಪ್ರಮಾಣ ಕಡಿಮೆ ಇದೆ ಎಂದಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ