ನೋಟು ನಿಷೇಧ ಕೆಚ್ಚೆದೆಯ, ನಿರ್ಣಾಯಕ ಹೆಜ್ಜೆ: ಅರುಣ್ ಜೇಟ್ಲಿ ಬಣ್ಣನೆ
ಬುಧವಾರ, 1 ಫೆಬ್ರವರಿ 2017 (12:56 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದ ನೋಟು ನಿಷೇಧ ನಿರ್ಧಾರ ಆರ್ಥಿಕತೆ ಚೇತರಿಕೆಗೆ ಕೆಚ್ಚೆದೆಯ, ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಇಂದು ಸಂಸತ್ತಿನಲ್ಲಿ ಸಾಮಾನ್ಯ ಬಜೆಟ್ ಮಂಡಿಸಿ ಮಾತನಾಡಿದ ಅವರು, ನೋಟು ನಿಷೇಧ ದೇಶದ ಆರ್ಥಿಕತೆಯ ಮೇಲೆ ವಿವಿಧ ರೀತಿಯ ಪ್ರಭಾವ ಬೀರಲಿದ್ದು, ಬೃಹತ್, ಪಾರದರ್ಶಕ ಮತ್ತು ವಾಸ್ತವತೆಯ ಜಿಡಿಪಿ ಸೃಷ್ಟಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.
ನೋಟು ನಿಷೇಧದಿಂದ ದೀರ್ಘಾವಧಿಯಲ್ಲಿ ಜಿಡಿಪಿ ಚೇತರಿಕೆ ಮತ್ತು ತೆರಿಗೆ ಆದಾಯದಲ್ಲಿ ಹೆಚ್ಚಳವಾಗಲಿದೆ. ದೇಶದ ಆರ್ಥಿಕತೆ ಸುವ್ಯವಸ್ಥೆಗೆ ತರಲು ಸಾಧ್ಯವಾಗುವುದಲ್ಲದೇ ತೆರಿಗೆ ವಂಚಕರ ಬಣ್ಣ ಬಯಲು ಮಾಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 2016 ನವೆಂಬರ್ 8 ರಂದು ಮೋದಿ ಸರಕಾರ ಕಪ್ಪು ಹಣದ ವಿರುದ್ಧ ನಿರ್ಣಾಯಕ ಸಮರ ಸಾರಿ 500 ರೂ ಮತ್ತು 1000 ರೂ, ನೋಟುಗಳ ಮೇಲೆ ನಿಷೇಧ ಹೇರಿತ್ತು. ಡಿಜಿಟಲ್ ಪಾವತಿಗೆ ಹೆಚ್ಚು ಒತ್ತು ನೀಡುವಂತೆ ಸರಕಾರ ಸಲಹೆ ನೀಡಿರುವುದನ್ನು ಸ್ಮರಿಸಬಹುದು.
ದೇಶದಲ್ಲಿ ಹೆಚ್ಚುತ್ತಿರುವ ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ನೋಟು ನಿಷೇಧ ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧಾರ ತೆಗೆದುಕೊಂಡಿತ್ತು. ಡಿಜಿಟಲ್ ಪಾವತಿಯಿಂದ ತೆರಿಗೆ ವಂಚಕರನ್ನು ಕಾನೂನು ವ್ಯಾಪ್ತಿಗೆ ತರಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.