ಪುತ್ತೂರು: ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ದಲಿತ ಕುಟುಂಬದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿದ 7 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯವು ಆರೋಪಿಗೆ 10 ವರ್ಷಗಳ ಕಠಿಣ ಸಜೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿಯನ್ನು ಗದಗ ಜಿಲ್ಲೆ ರೋಣ ತಾಲೂಕಿನ ದಿಂಡೂರು ಗ್ರಾಮದ ಗೌಡಗೇರಿ ಓಣಿಯ ಸಂಗಪ್ಪ ಎಂಬುವರ ಪುತ್ರ ಪೀರೇಶ ಅಲಿಯಾಸ್ ಪೀರಪ್ಪ ಸಂಗಪ್ಪ ಮಾಳೋತ್ತರ (35) ಎಂದು ಗುರುತಿಸಲಾಗಿದೆ.
2017ರಲ್ಲಿ ಬಾಲಕಿಯನ್ನು ಬಾಡಿಗೆ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ನಂತರ ಪದೇ ಪದೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆ ಗರ್ಭ ಧರಿಸಿದ್ದಳು ಎನ್ನಲಾಗಿದೆ.
ಸಂಪ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ನ್ಯಾಯಾಲಯ 18 ಸಾಕ್ಷಿಗಳನ್ನು ವಿಚಾರಣೆ ನಡೆಸಿತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಸರಿತಾ ಡಿ, ಪೀರೇಶ್‌ಗೆ 10 ವರ್ಷಗಳ ಕಠಿಣ ಸಜೆ, 35 ಸಾವಿರ ರೂ. ದಂಡ ವಿಧಿಸಿ, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 5 ವರ್ಷ ಸಾದಾ ಸಜೆ ವಿಧಿಸಿ ಆದೇಶಿಸಿದರು.