ವಾರ್ಷಿಕವಾಗಿ 1200 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಪ್ರತಿನಿತ್ಯ 3.5ಕೋಟಿ ರೂಪಾಯಿ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ, ರೈತರು ಇನ್ನೂ ಎಷ್ಟೆ ಪ್ರಮಾಣದಲ್ಲಿ ಹಾಲು ಉತ್ಪಾದಿಸಿದರೂ ಸಹಾ ಸರ್ಕಾರ ಪ್ರೋತ್ಸಾಹ ಧನ ನೀಡಲು ಸಿದ್ದವಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.
ರಾಜ್ಯದಲ್ಲಿ ಪ್ರತಿನಿತ್ಯ 72 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಮೂಲಕ ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ರಾಜ್ಯದಲ್ಲಿ ಈಗ ಬರ ಪರಿಸ್ಥಿತಿ ಇರುವುದರಿಂದ ದಿನನಿತ್ಯ 2 ಲಕ್ಷ ಲೀಟರ್ ಕುಸಿತವಾಗಿ 70 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಧಾರವಾಡದ ಲಕಮನಹಳ್ಳಿ ಒಕ್ಕೂಟದ ಮುಖ್ಯ ಡೇರಿ ಆವರಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿ ಮುಖ್ಯಮಂತ್ರಿಗಳು ಮಾತನಾಡಿದರು.
ಒಟ್ಟು ಕರ್ನಾಟಕ ಅಭಿವೃದ್ದಿಯಾದರೆ ಮಾತ್ರ ರಾಜ್ಯದ ತಲಾವಾರು ಆದಾಯ ಹೆಚ್ಚಾಗುತ್ತದೆ, ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ 1ಲಕ್ಷ ಕೋಟಿ ರೂಪಾಯಿ ಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಈ ಹಿಂದೆ 17ಸಾವಿರ ಕೋಟಿ ರೂ. ಸಾಕಾಗಿತ್ತು. ಈಗ ಭೂಸ್ವಾಧೀನ, ಪುನರ್ವಸತಿ ಸೇರಿ 55 ಸಾವಿರ ಕೋಟಿ ರೂಪಾಯಿಗಳಿಗೆ ಏರಿದೆ. ನಾವು ಅಧಿಕಾರಕ್ಕೆ ಬರುವಾಗ ವಾಗ್ದಾನ ಮಾಡಿದಂತೆ 50ಸಾವಿರ ಕೋಟಿ ರೂಪಾಯಿಗಳನ್ನು ನೀಡಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.