ಇಂದಿನಿಂದ ಪೆಟ್ರೋಲ್ ಬೆಲೆ ಪ್ರತಿ ದಿನ ನಿಗದಿ

ಸೋಮವಾರ, 1 ಮೇ 2017 (05:04 IST)
ನವದೆಹಲಿ: ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತರಕಾರಿ ಹಾಗೂ ಇತರ ದಿನಸಿ ಸಾಮಾನುಗಳ ಬೆಲೆಯಂತೆ ಪ್ರತಿ ದಿನಕ್ಕೊಂದು ರೀತಿಯಲ್ಲಿ ನಿಗದಿಯಾಗಲಿದೆ.

 
ಮುಂದುವರಿದ ಮಾರುಕಟ್ಟೆಗಳಲ್ಲಿರುವಂತೆ ಸದ್ಯಕ್ಕೆ ದೇಶದ ಐದು ಪ್ರಮುಖ ಸ್ಥಳಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಲಿಮಿಟೆಡ್ ಸಂಸ್ಥೆಗೆ ಸೇರಿದ ಪೆಟ್ರೋಲ್ ಬಂಕ್ ಗಳಲ್ಲಿ ದೈನಂದಿನ ದರ ನಿಗದಿಯಾಗಲಿದೆ.

ಅದು ಸದ್ಯಕ್ಕೆ ಕೇವಲ ಐದು ನಗರಗಳಲ್ಲಿ ಜಾರಿಯಾಗಲಿದ್ದು, ಇಲ್ಲಿನ ಲಾಭ ನಷ್ಟ ನೋಡಿಕೊಂಡು ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಕಡೆ ಈ ವ್ಯವಸ್ಥೆ ಜಾರಿಯಾಗಲಿದೆ. ಸದ್ಯಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣ, ರಾಜಸ್ಥಾನದ ಉದಯ್ ಪುರ, ಪಾಂಡಿಚೇರಿ,  ಜಾರ್ಖಂಡ್ ನ ಜಮ್ಷೆಡ್ ಪುರ, ಮತ್ತು ಚಂಢೀಘಡದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಮತ್ತು ಭಾರತೀಯ ಕರೆನ್ಸಿ ಮೌಲ್ಯಕ್ಕೆ ಹೊಂದಿಕೊಂಡು ದರ ನಿಗದಿಯಾಗಲಿದೆ. ಎರಡು ವಾರಕ್ಕೊಮ್ಮೆ ದರ ಬದಲಾವಣೆ ಮಾಡುವ ಬದಲು ರೂಪಾಯಿ ಮೌಲ್ಯಕ್ಕೆ ಹೊಂದಿಕೊಂಡು ಪ್ರತಿ ದಿನ ದರ ನಿಗದಿ ಮಾಡಲಾಗುವುದು ಎಂದು ಇಂಡಿಯನ್ ಆಯಿಲ್ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ