ಬೆಂಗಳೂರು: ಬಿಜೆಪಿ, ಸಂವಿಧಾನ ಮತ್ತು ಸಂವಿಧಾನಕರ್ತೃ ಡಾ. ಅಂಬೇಡ್ಕರರಿಗೆ ಗರಿಷ್ಠ ಗೌರವ ನೀಡಿದ್ದರೆ, ಸಂವಿಧಾನಕ್ಕೆ ಇಡೀ ದೇಶದಲ್ಲಿ ಅಪಚಾರ ಮಾಡಿರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಎಂದು ಇಡೀ ದೇಶವೇ ಹೇಳುತ್ತದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ಎಸ್.ಸಿ. ಮತ್ತು ಎಸ್.ಟಿ. ಮೋರ್ಚಾ ವತಿಯಿಂದ ಸಂವಿಧಾನ ಸನ್ಮಾನ ಅಭಿಯಾನದ ಅಂಗವಾಗಿ ಮನೆ-ಮನಕ್ಕೆ ಸಂವಿಧಾನ, ಹರ್-ಘರ್ ಸಂವಿಧಾನ ಪರಿಕಲ್ಪನೆಯ ಚಿತ್ರ ಶೀರ್ಷಿಕೆ ಗೀತೆಯನ್ನು ಇಂದು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಬಿಜೆಪಿಯು ಸಂವಿಧಾನಕ್ಕೆ ಮತ್ತು ಬಾಬಾ ಸಾಹೇಬ ಡಾ. ಅಂಬೇಡ್ಕರ್ ಅವರಿಗೆ ಎಲ್ಲ ರೀತಿಯಲ್ಲಿ ಗೌರವ ಕೊಟ್ಟಿದೆ. ಡಾ. ಅಂಬೇಡ್ಕರರು ಹುಟ್ಟಿದ ದಿನದಿಂದ ಅವರ ಅಂತ್ಯವಾಗುವವರೆಗಿನ ಪ್ರಮುಖ ಸ್ಥಳಗಳನ್ನು ಗುರುತಿಸಿ, ಅಂತರಾಷ್ಟ್ರೀಯ ಸ್ಮಾರಕಗಳನ್ನು ನಿರ್ಮಿಸಿ ಅವರನ್ನು ಗೌರವಿಸುವ ಕೆಲಸ ಬಿಜೆಪಿ ಮಾಡಿದೆ. ಸಂವಿಧಾನಕ್ಕೆ ಬಿಜೆಪಿ ಎಲ್ಲಿಯೂ ಅಪಮಾನ ಮಾಡಿಲ್ಲ ಎಂದು ವಿವರಿಸಿದರು.
ರಾಹುಲ್ ಗಾಂಧಿಯವರು ಹಿಂದುತ್ವವನ್ನು ಬೈಯುತ್ತಾರೆ, ದೇವರನ್ನು ನಂಬುವುದಿಲ್ಲವೆಂದು ಹೇಳುತ್ತಾರೆ. ಆದರೆ ಮುಸಲ್ಮಾನರ ದರ್ಗಾಗಳಲ್ಲಿ ಮತ್ತು ಕ್ರೈಸ್ತರ ಚರ್ಚುಗಳಿಗೆ ಹೋಗಿ ಪ್ರಾರ್ಥಿಸುತ್ತಾರೆ. ಆಗ ಬಿಜೆಪಿ ಕಾರ್ಯಕರ್ತರು ಅವರನ್ನು ಟೀಕಿಸಿದರೆ ಆ ಸಂದರ್ಭದಲ್ಲಿ ಹೋಗಿ ತಿಲಕವನ್ನು ಹಣೆಗೆ ಇಟ್ಟು ನಾವು ಹಿಂದು ಎಂದು ಹೇಳುತ್ತಾರೆ ಎಂದು ಆಕ್ಷೇಪಿಸಿದರು.
ಅವರಲ್ಲಿ ಪಾಪಪ್ರಜ್ಞೆ ಕಾಡುತ್ತಿದೆ
ಕಾಂಗ್ರೆಸ್ಸಿಗರು ಮೊದಲಿನಿಂದ ಸಂವಿಧಾನವನ್ನು ಗೌರವಿಸಿದ್ದರೆ ಇಂದು ರಾಹುಲ್ ಗಾಂಧಿಯವರು ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಅವರಿಗೆ ಬರುತ್ತಿರಲಿಲ್ಲ ಎಂದು ತಿಳಿಸಿದರು. ಇಂದು ಏಕೆ ಸಂವಿಧಾನಕ್ಕೆ ಗೌರವ ಕೊಡುತ್ತಿದ್ದಾರೆ ಎಂದರೆ ಅವರಿಗೆ ಪಾಪಪ್ರಜ್ಞೆ ಕಾಡುತ್ತಿದೆ. ಸಂವಿಧಾನಕ್ಕೆ ನಾವು ದ್ರೋಹ ಮಾಡಿದ್ದೇವೆ. ಆದ್ದರಿಂದ ಪ್ರಸ್ತುತ ಅದನ್ನು ಮರೆಮಾಚುವ ಸಲುವಾಗಿ ಸಂವಿಧಾನದ ಪುಸ್ತಕವನ್ನು ರಾಹುಲ್ ಗಾಂಧಿ ಅವರು ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.