ಜಿಎಸ್ ಟಿ ಜಾರಿಗೆ ಕ್ಷಣಗಣನೆ: ಮಧ್ಯ ರಾತ್ರಿಯಿಂದ ತೆರಿಗೆ ಪದ್ಧತಿ ಹೊಸಯುಗ ಆರಂಭ

ಶುಕ್ರವಾರ, 30 ಜೂನ್ 2017 (11:12 IST)
ನವದೆಹಲಿ:ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಮಧ್ಯರಾತ್ರಿ ಒಂದು ರಾಷ್ಟ್ರ, ಒಂದು ತೆರಿಗೆ ಪರಿಕಲ್ಪನೆಯ ಯುಗಾರಂಭಕ್ಕೆ ಭಾರತ ಸಾಕ್ಷಿಯಾಗಲಿದೆ.
 
ರಾತ್ರಿ 12 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್​ನ ವಿಶೇಷ  ಅಧಿವೇಶನದಲ್ಲಿ ಜಿಎಸ್​ಟಿ ಗೆ ಚಾಲನೆ ನೀಡಲಿದ್ದಾರೆ.  ಜಿಎಸ್ ಟಿ ಜಾರಿಗೆ  ಇಂದು ಮಧ್ಯರಾತ್ರಿ ವಿಶೇಷ ಅಧಿವೇಶನ ಕರೆಯಲಾಗಿದ್ದು, ರಾತ್ರಿ 11 ಗಂಟೆಗೆ ಸಂಸತ್​ನ ವಿಶೇಷ ಅಧಿವೇಶನ ಆರಂಭಗೊಳ್ಳಲಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಜಿಎಸ್​ಟಿ ಕುರಿತು ಸಂಸತ್ ಭವನಕ್ಕೆ ವಿವರಣೆ  ನೀಡಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಸತ್ ಉದ್ದೇಶಿಸಿ ಮಾತನಾಡಲಿದ್ದು, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸಹಿತ ಹಲವು  ಗಣ್ಯರು ಉಪಸ್ಥಿತರಿರುತ್ತಾರೆ.
 
ವಿಶೇಷ ಅಧಿವೇಶನಕ್ಕೆ ಉದ್ಯಮಿ ರತನ್ ಟಾಟಾ, ನಟ ಅಮಿತಾಭ್​ ಬಚ್ಚನ್​ ರಿಗೂ ಆಹ್ವಾನ ನೀಡಲಾಗಿದ್ದು, ಅಂತೆಯೇ ಜಿಎಸ್​ಟಿಗೆ ಸಂಬಂಧಿಸಿದ ಕಿರುಚಿತ್ರವೊಂದು ಪ್ರದರ್ಶನಗೊಳ್ಳಲಿದೆ. ಇನ್ನು ಜಿಎಸ್ ಟಿ ವಿಶೇಷ ಅಧಿವೇಶನವನ್ನು ವಿಪಕ್ಷಗಳು ಬಹಿಷ್ಕರಿಸಿವೆ. ಸ್ವಾತಂತ್ರ್ಯ ಘೋಷಣೆಯ ಮುನ್ನಾದಿನ  ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ದೇಶವನ್ನು ಉದ್ದೇಶಿಸಿ ಸೆಂಟ್ರಲ್‌ ಹಾಲ್‌ನಿಂದ ಮಧ್ಯರಾತ್ರಿ ಮಾತನಾಡಿದ್ದರು.  ಪ್ರಧಾನಿ ನರೇಂದ್ರ ಮೋದಿ ಅವರು ಅದೇ ರೀತಿಯಲ್ಲಿ ಭಾಷಣ ಮಾಡಲು ನಿರ್ಧರಿಸಿರುವುದು ಕೂಡ ಕಾಂಗ್ರೆಸ್‌ನ ಅತೃಪ್ತಿಗೆ ಕಾರಣವಾಗಿದೆ. ಸಂಸತ್ತಿನ ಸೆಂಟ್ರಲ್‌ ಹಾಲನ್ನು ಮಧ್ಯರಾತ್ರಿ  ಕಾರ್ಯಕ್ರಮ ನಡೆಸುವುದಕ್ಕೆ ಈವರೆಗೆ ಮೂರು ಬಾರಿ ಮಾತ್ರ ಬಳಸಿಕೊಳ್ಳಲಾಗಿದೆ.
 

ವೆಬ್ದುನಿಯಾವನ್ನು ಓದಿ