ಕಾರು ಉತ್ಪಾದನೆ: ದ.ಕೊರಿಯಾ ಹಿಂದಕ್ಕೆ ತಳ್ಳಿದ ಭಾರತಕ್ಕೆ ವಿಶ್ವದಲ್ಲಿಯೇ ಐದನೇ ಸ್ಥಾನ

ಬುಧವಾರ, 28 ಸೆಪ್ಟಂಬರ್ 2016 (14:55 IST)
ಕಾರು ಉತ್ಪಾದನೆಯಲ್ಲಿ ದಕ್ಷಿಣ ಕೊರಿಯಾವನ್ನು ಹಿಂದಕ್ಕೆ ತಳ್ಳಿದ ಭಾರತ ವಿಶ್ವದಲ್ಲಿಯೇ ಐದನೇ ಸ್ಥಾನ ಪಡೆದಿದೆ. ಜರ್ಮನಿ, ಜಪಾನ್, ಅಮೆರಿಕ ಮತ್ತು ಚೀನಾ ದೇಶಗಳು ಮಾತ್ರ ಭಾರತಕ್ಕಿಂತ ಮುಂಚೂಣಿಯಲ್ಲಿವೆ. 
 
ಪ್ರಸಕ್ತ ವರ್ಷದ ಏಳು ತಿಂಗಳ ಅವಧಿಯಲ್ಲಿ 25.7 ಲಕ್ಷ ಕಾರುಗಳನ್ನು ಉತ್ಪಾದಿಸುವ ಮೂಲಕ ವಿಶ್ವದಲ್ಲಿಯೇ ಐದನೇ ಸ್ಥಾನ ಪಡೆದಿದೆ.
 
ಲ್ಯಾಂಡ್ ಆಫ್ ದಿ ಮಾರ್ನಿಂಗ್ ಕಾಮ್ ಎನ್ನುವ ಗೌರವ ಪಡೆದಿರುವ ದಕ್ಷಿಣ ಕೊರಿಯಾ, ಕಳೆದ ವರ್ಷ 45.5 ಲಕ್ಷ ಕಾರುಗಳನ್ನು ತಯಾರಿಸಿದ್ದರೆ, ಭಾರತ 41.2 ಲಕ್ಷ ಕಾರುಗಳನ್ನು ಉತ್ಪಾದಿಸಿತ್ತು. ಆದರೆ, ಈ ಬಾರಿ ದಕ್ಷಿಣ ಕೊರಿಯಾ ಭಾರತಕ್ಕಿಂತ ಹಿನ್ನೆಡೆ ಅನುಭವಿಸಿದೆ.  
 
ದೇಶಿಯ ಮತ್ತು ರಫ್ತು ವಹಿವಾಟಿನಲ್ಲಿ ಕುಸಿತವಾಗಿದ್ದರಿಂದ ದಕ್ಷಿಣ ಕೊರಿಯಾ ಕಾರು ತಯಾರಿಕರಿಗೆ ನಷ್ಟ ಎದುರಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. 
 
ಹುಂಡೈ ಕಂಪೆನಿಯ ಕಾರ್ಮಿಕ ಸಂಘಟನೆಗಳು ವೇತನ ಹೆಚ್ಚಳಕ್ಕಾಗಿ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರಗಳು ಕೂಡಾ ಕಾರು ಉತ್ಪಾದನೆಯ ಮೇಲೆ ಪರಿಣಾಮ ಬೀರಿವೆ. ಕಾರ್ಮಿಕರ ಮುಷ್ಕರಗಳಿಂದ 1 ಲಕ್ಷ ಕಾರುಗಳ ಉತ್ಪಾದನೆ ಕುಂಠಿತವಾಗಿದ್ದು 13 ಸಾವಿರ ಕೋಟಿ ನಷ್ಟವಾಗಿದೆ ಎಂದು ಹುಂಡೈ ಕಂಪೆನಿ ತಿಳಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ