ರಾಜ್ಯದಲ್ಲಿ ಸಂಚರಿಸಲಿವೆ 5500 ಹೊಸ ಬಸ್‌

ಗುರುವಾರ, 19 ಜನವರಿ 2017 (12:51 IST)
ರಾಜ್ಯದ್ಯಂತ ಇರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೊಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ರಾಜ್ಯದಲ್ಲಿ 5500 ಹೊಸ ಬಸ್‌ಗಳ ಸಂಚಾರವಾಗಲಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
 
ಬೇಲೂರು ತಾಲ್ಲೂಕಿನ ಅರೆಹಳ್ಳಿ ಬಸ್ ನಿಲ್ದಾಣ ಹಾಗೂ ಬೇಲೂರು ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರು ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಗಳ ಸುಧಾರಣೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಈಗಾಗಲೆ 3500 ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು ಇನ್ನೂ 2000 ಹೊಸ ಬಸ್‌ಗಳು ಮಾರ್ಚ್ ಅಂತ್ಯದೊಳಗೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ ಎಂದು ಸಾರಿಗೆ ಸಚಿವರು ಹೇಳಿದರು.
 
ರಾಜ್ಯದಾದ್ಯಂತ ಇರುವ ಬಸ್ ಡಿಪೊಗಳಲ್ಲಿ ವಾಹನ ಚಾಲಕರು ಮತ್ತು ನಿರ್ವಾಹಕರ ವಿಶ್ರಾಂತಿ ಕೊಠಡಿಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಸಿಬ್ಬಂದಿಗಳ ಕರ್ತವ್ಯವಾಗಿದೆ ಎಂದರು. ಬೇಲೂರಿನ ನೂತನ ಬಸ್ ಘಟಕದ ಆವರಣದಲ್ಲಿ ಕಾಂಕ್ರೀಟ್ ಹಾಕುವ ಕಾರ್ಯಕ್ಕೆ ಮುಂದಿನ ಬಜೆಟ್‌ನಲ್ಲಿ 50 ಲಕ್ಷ ರೂ ಅನುದಾನ ನೀಡಲಾಗುವುದು. 
 
ಹಾಗೆಯೇ ಬೇಲೂರು ವಿಶ್ವವಿಖ್ಯಾತ ಸ್ಥಳವಾಗಿರುವುದರಿಂದ ಇಲ್ಲಿನ ಬಸ್ ನಿಲ್ದಾಣವನ್ನು ಉನ್ನತೀಕರಿಸುವ ಅಗತ್ಯವಿದೆ. ಆದರೆ ಅಲ್ಲಿ ಜಾಗದ ಕೊರತೆ ಇದ್ದು ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಿ ನಿಲ್ದಾಣಕ್ಕೆ ಹೊಂದಿಕೊಂಡಿರುವ ಜಾಗವನ್ನು ಇಲಾಖೆಗೆ ಕೊಡಿಸಿಕೊಟ್ಟಲ್ಲಿ ಅತ್ಯಂತ ಶೀಘ್ರವಾಗಿ ಅತ್ಯಾಧುನಿಕ ನಿಲ್ದಾಣವನ್ನು ನಿರ್ಮಿಸಿಕೊಡಲಾಗುವುದು ಎಂದರು.
 
ಆಡಳಿತ ಅನುಕೂಲಕ್ಕಾಗಿ ಬೇಲೂರು, ಸಕಲೇಶಪುರ ಮತ್ತು ಅರಸೀಕೆರೆ ತಾಲ್ಲ್ಲೂಕುಗಳನ್ನು ಚಿಕ್ಕಮಗಳೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಅಗತ್ಯವೆನಿಸಿದಲ್ಲಿ ಹಾಸನ ವಿಭಾಗಕ್ಕೆ ಈ ತಾಲ್ಲುಕುಗಳನ್ನು ಸೇರಿಸಲು ಯಾವುದೇ ಅಡ್ಡಿಯಿಲ್ಲ ಆದರೆ ಅನುಕೂಲ ಮುಖ್ಯ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ