ನವದೆಹಲಿ: ಕೇಂದ್ರ ಮಧ‍್ಯಂತರ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆದಾರರಿಗೆ ಕೆಲವು ಕೊಡುಗೆ ನೀಡಿದ್ದಾರೆ. ಜೊತೆಗೆ ತೆರಿಗೆ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಯಾಗಿದೆ.
ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಜಿಎಸ್ ಟಿ ಸಂಗ್ರಹಣೆಯಲ್ಲಿ 2 ಪಟ್ಟು ಹೆಚ್ಚಳವಾಗಿದೆ ಎಂದು ವಿತ್ತ ಸಚಿವೆ ಘೋಷಿಸಿದ್ದಾರೆ. ಎಲ್ಲಾ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ಘೋಷಣೆ ಮಾಡಲಾಗಿದೆ. ಆದರೆ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಕಾರ್ಪೋರೇಟ್ ಟ್ಯಾಕ್ಸ್ ಶೇ.30 ರಿಂದ ಶೇ.22 ಕ್ಕೆ ಇಳಿಕೆ ಮಾಡಲಾಗಿದೆ. ತೆರಿಗೆ ಸಂಗ್ರಹದಲ್ಲಿ ಕಳೆದ ಐದು ವರ್ಷದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ ಎಂಬ ಸಿಹಿ ಸುದ್ದಿಯನ್ನು ಘೋಷಿಸಿದ್ದಾರೆ.
ವಿಶೇಷವಾಗಿ ಆದಾಯ ತೆರಿಗೆ ಕಟ್ಟಲು 7 ಲಕ್ಷ ರೂ.ವರೆಗೆ ಆದಾಯ ಮಿತಿ ಹೆಚ್ಚಿಸಲಾಗಿದೆ. ಇದುವರೆಗೆ ಇದು 5 ಲಕ್ಷ ರೂ. ಗಳಾಗಿತ್ತು. ಅಂದರೆ ವಾರ್ಷಿಕ ಆದಾಯ 7 ಲಕ್ಷ ರೂ.ಗಿಂತ ಕಡಿಮೆಯಿದ್ದಲ್ಲಿ ಆದಾಯ ತೆರಿಗೆ ಕಟ್ಟಬೇಕಾಗಿಲ್ಲ. ಇದುವರೆಗೆ 5 ಲಕ್ಷ ರೂ. ಆದಾಯ ಇದ್ದವರಿಗೆ ಆದಾಯ ತೆರಿಗೆ ಅನ್ವಯವಾಗುತ್ತಿತ್ತು. ಅಲ್ಲದೆ ಟಿಡಿಎಸ್ ಕಡಿತವಾಗುವವರು ಇನ್ನು ಮುಂದೆ 10 ದಿನದಲ್ಲಿ ವಾಪಸ್ ಮಾಡಲು ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಉಳಿದಂತೆ ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಯಾವುದೇ ಬದಲಾವಣೆಯಿಲ್ಲ.
ಈ ವರ್ಷ ಚುನಾವಣೆ ಎದುರಿಸಬೇಕಾಗಿರುವುದರಿಂದ ಮೋದಿ ಸರ್ಕಾರ ಜನರನ್ನು ಸೆಳೆಯುವ ಉದ್ದೇಶದಿಂದ ಜನಪ್ರಿಯ ಯೋಜನೆ ಆಥವಾ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಬಹುದೇ ಎಂಬ ನಿರೀಕ್ಷೆಯಿತ್ತು. ಆದರೆ ಅದು ಎರಡನ್ನೂ ಸುಳ್ಳಾಗಿಸಿದೆ. ಯಾವುದೇ ವಿನಾಯಿತಿಯನ್ನೂ ಘೋಷಿಸಿಲ್ಲ ಎಂಬುದು ಗಮನಾರ್ಹ. ಕೃಷಿ ಮತ್ತು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಿದೆ ಎಂದು ಹೇಳಿದರೂ ವಿಶೇಷ ಘೋಷಣೆ ಮಾಡಿಲ್ಲ.