ಮೈಸೂರು ನಗರಕ್ಕೆ ರೂ.950 ಕೋಟಿ ಅನುದಾನ

ಸೋಮವಾರ, 13 ಫೆಬ್ರವರಿ 2017 (15:36 IST)
ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ ಮುಂತಾದ ಹಲವಾರು ವಿಶೇಷಣೆಗಳನ್ನು ಹೊಂದಿರುವ ಮೈಸೂರು ನಗರದ ಸೌಂದರ್ಯ ಹಾಗೂ ಸ್ವಚ್ಛತೆ ಉಳಿಸಿಕೊಳ್ಳಲು ಹಾಗೂ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಮೈಸೂರಿಗೆ ಒದಗಿಸಲು ಸರ್ಕಾರ ಕಳೆದ ಮೂರೂವರೆ ವರ್ಷಗಳಲ್ಲಿ 950 ಕೋಟಿ ರೂ.ಗಳನ್ನು ಮೈಸೂರು ನಗರಕ್ಕೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಭಾನುವಾರ ಮೈಸೂರಿನಲ್ಲಿ ಆಯೋಜಿಸಿದ್ದ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಸವಲತ್ತುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
 
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮೈಸೂರಿಗೆ ಜಿಲ್ಲಾ ಆಸ್ಪತ್ರೆ ಕಟ್ಟಡ, ಟ್ರಾಮಾ ಸೆಂಟರ್, ಜಯದೇವ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಮಹಾರಾಣಿ ಕಾಲೇಜಿನಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಾರೆ. 
 
ಆ ಕಾಲೇಜಿಗೆ ಹೊಸದಾಗಿ ಕಟ್ಟಡ ಹಾಗೂ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. 136 ಹಾಸಿಗೆಯ ಜಯದೇವ ಆಸ್ಪತ್ರೆ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ನಂತರ ಬೆಂಗಳೂರಿನಲ್ಲಿ ಸಿಗುತ್ತಿದ್ದ ವೈದ್ಯಕೀಯ ಸೌಲಭ್ಯ ಮೈಸೂರಿನ ಜನತೆಗೆ ಇಲ್ಲೇ ಸಿಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
 
ಮೈಸೂರಿಗೆ ಜಿಲ್ಲಾ ಆಸ್ಪತ್ರೆ ಇರಲಿಲ್ಲ. ಕಳೆದ ವರ್ಷ 500 ಹಾಸಿಗೆಗಳುಳ್ಳ ಜಿಲ್ಲಾ ಆಸ್ಪತ್ರೆಯನ್ನು ಮಂಜೂರು ಮಾಡಿದ್ದೇನೆ. ಇದರ ಜೊತೆಗೆ 700 ಕೋಟಿ ರೂ. ವೆಚ್ಚದಲ್ಲಿ ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಹ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
 
ಮಹಾನಗರ ಪಾಲಿಕೆಗೆ 350ಕೋಟಿ: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ವಿವಿಧ ಅಭಿವೃದ್ಧಿ ಕೈಗೊಳ್ಳಲು 350 ಕೋಟಿ ನೀಡಿದ್ದೇವೆ. ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅನುದಾನ ನೀಡಲಾಗುವುದು. ಮೈಸೂರಿಗೆ ಎರಡು ಬಾರಿ ಸ್ವಚ್ಛ ನಗರಿ ಗೌರವ ಸಿಗಲು ಜನರ ಸಹಕಾರ ಹಾಗೂ ಪೌರಕಾರ್ಮಿಕರ ಶ್ರಮ ಕಾರಣ. ಎಲ್ಲಾ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂ ಮಾಡಲು ತೀರ್ಮಾನಿಸಲಾಗಿದೆ ಎಂದರು.
 
ಎಲೆ ತೋಟದ ನಿವಾಸಿಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಜಂಟಿ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದೇನೆ. ಸ್ವಾಧೀನದಲ್ಲಿರುವವರಿಗೆ ಹಕ್ಕು ಪತ್ರ ನೀಡಲು ಕ್ರಮವಹಿಸಲಾಗುವುದು ಎಂದರು. ಸೂಯಜ್ ಫಾರಂ ನಿಂದ ದುರ್ವಾಸನೆ ಬರುತ್ತಿದೆ. ಇದರ ನಿವಾರಣೆಗಾಗಿ ಮುಂದಿನ ಬಜೆಟ್‍ನಲ್ಲಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಮತ್ತು ಗಣ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ