ತಾಂತ್ರಿಕ ದೋಷ; UCO ಬ್ಯಾಂಕ್ ಖಾತೆದಾರರಿಗೆ 820 ಕೋಟಿ ಜಮೆ!
ಶುಕ್ರವಾರ, 17 ನವೆಂಬರ್ 2023 (18:00 IST)
ದೇಶದ ಬ್ಯಾಂಕ್ ಗಳಲ್ಲಿ ಒಂದಾದ ಯುಕೊ ಬ್ಯಾಂಕ್ ಖಾತೆದಾರರ ಖಾತೆಗೆ ಸುಮಾರು 820 ಕೋಟಿ ರೂಪಾಯಿ ತಾಂತ್ರಿಕ ದೋಷದಿಂದ ಜಮೆಯಾಗಿದೆ ಎಂದು ಬ್ಯಾಂಕ್ ತಿಳಿಸಿದ್ದು ಅದನ್ನು ಈಗ ಹಿಂಪಡೆಯಲಾಗುತ್ತಿದೆ. ಇದುವರೆಗೆ ಕೇವಲ 649 ಕೋಟಿ ಅಂದರೆ ಶೇ.79ರಷ್ಟು ಹಣ ವಾಪಸ್ ಬಂದಿದೆ ಎಂದು ಯುಕೊ ಬ್ಯಾಂಕ್ ಹೇಳಿದೆ.
ಈ ಹಣವನ್ನು ಬ್ಯಾಂಕ್‌ನ ಕೆಲವು ಖಾತೆಗಳಲ್ಲಿ ತಕ್ಷಣದ ಪಾವತಿ ವ್ಯವಸ್ಥೆ ಮೂಲಕ ತಪ್ಪಾಗಿ ಜಮಾ ಮಾಡಲಾಗಿದೆ ಎಂದು ಬ್ಯಾಂಕ್ ಹೇಳಿದೆ. ವಿವಿಧ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಬ್ಯಾಂಕ್ ಹಣ ಜಮೆಯಾಗಿರುವ ಖಾತೆಗಳನ್ನು ನಿರ್ಬಂಧಿಸಿದೆ.
ಇನ್ನು ಪ್ರಸ್ತುತ 820 ಕೋಟಿಗಳಲ್ಲಿ 649 ಕೋಟಿಗಳನ್ನು ಮರುಪಡೆಯಲು ಸಾಧ್ಯವಾಯಿತು ಎಂದು ಯುಕೋ ಬ್ಯಾಂಕ್ ಇಂದು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಇದು ಮೊತ್ತದ ಸುಮಾರು 79 ಪ್ರತಿಶತವಾಗಿದೆ. ಆದರೆ, ಇದು ತಾಂತ್ರಿಕ ದೋಷವೋ ಅಥವಾ ಬ್ಯಾಂಕ್ ಹ್ಯಾಕ್ ಮಾಡುವ ಯತ್ನವೋ ಎಂಬುದನ್ನು ಹೇಳಲು ಬ್ಯಾಂಕ್ ಗೆ ಇದುವರೆಗೂ ಸಾಧ್ಯವಾಗಿಲ್ಲ.