ಆನ್‌ಲೈನ್‌ ವಹಿವಾಟು: 7 ಲಕ್ಷ ಗ್ರಾಹಕರಿಗೆ 3700 ಕೋಟಿ ರೂ.ವಂಚಿಸಿದ ಆರೋಪಿಗಳು ಅರೆಸ್ಟ್

ಗುರುವಾರ, 2 ಫೆಬ್ರವರಿ 2017 (15:50 IST)
ಆನ್‌ಲೈನ್ ವಹಿವಾಟಿನ ನೆಪದಲ್ಲಿ ಗ್ರಾಹಕರಿಗೆ 3700 ಕೋಟಿ ರೂಪಾಯಿಗಳನ್ನು ವಂಚಿಸಿದ ನಕಲಿ ಕಂಪೆನಿಯ ಭಾರಿ ವಂಚನೆಯನ್ನು ಉತ್ತರಪ್ರದೇಶ ಪೊಲೀಸರು ಬಹಿರಂಗಗೊಳಿಸಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
 
ಪ್ರಾಥಮಿಕ ವಿಚಾರಣೆಯಿಂದ ನೋಯ್ಡಾ ಸೆಕ್ಟರ್-63ರಲ್ಲಿರುವ ಅಬ್ಲಾಜ್ ಇನ್ಫೋ ಸಲ್ಯೂಶನ್ಸ್ ಲಿಮಿಟೆಡ್ ಕಂಪೆನಿ, ಪ್ರತಿ ಕ್ಲಿಕ್‌ಗೆ 5 ರೂಪಾಯಿ ಯೋಜನೆಯಡಿಯಲ್ಲಿ 7 ಲಕ್ಷ ಗ್ರಾಹಕರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. 
 
ಬಂಧಿತ ಆರೋಪಿಗಳು ಸೋಶಿಯಲ್ ಟ್ರೇಡ್. ಬಿಜ್‌ ಎನ್ನುವ ವೆಬ್‌ಪೋರ್ಟಲ್ ಸಂಚಾಲಕರಾಗಿದ್ದಾರೆ. ಕಂಪೆನಿಯ ಸದಸ್ಯತ್ವರಾಗಲು ಗ್ರಾಹಕರು 5750 ರೂಪಾಯಿಗಳಿಂದ 57,500 ರೂಪಾಯಿಗಳನ್ನು ಕಂಪೆನಿ ಖಾತೆಗೆ ಜಮೆ ಮಾಡಿದ ನಂತರ ಗ್ರಾಹಕರು ಪ್ರತಿ ಕ್ಲಿಕ್‌ಗೆ 5 ರೂಪಾಯಿಗಳನ್ನು ಪಡೆಯಲು ಅವಕಾಶ ನೀಡಲಾಗಿತ್ತು.
 
ಕಂಪೆನಿಯ ಮೇಲೆ ದಾಳಿ ನಡೆಸಿ 500 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಲ್ಲದೇ ಬ್ಯಾಂಕ್‌ ಖಾತೆಗಳನ್ನು ಸೀಜ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.   
 
ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಕಂಪೆನಿಯ ಹೆಸರನ್ನು ಪದೇ ಪದೇ ಬದಲಾಯಿಸುತ್ತಿದ್ದರು. ಸೋಶಿಯಲ್ ಟ್ರೇಡ್. ಬಿಜ್‌ ದಿಂದ ಫ್ರೀಹಬ್ ಡಾಟ್ ಕಾಮ್, ಇಂಟ್‌ಮಾರ್ಟ್ ಡಾಟ್ ಕಾಂ, ಫ್ರೆಂಜಿಪ್ ಡಾಟ್ ಕಾಂ, 3ಡಬ್ಲ್ಯೂ ಡಾಟ್ ಕಾಂ ಸೇರಿದಂತೆ ಹಲವಾರು ಹೆಸರುಗಳನ್ನು ಬಳಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ