ಕೊಬ್ಬರಿ ಕಳ್ಳನಂತೆ ಈಗ ನಿರ್ಮಾಪಕನಾಗಿರೋ ಮಂಜು!

EVENT
ಗೋಟು ತೆಂಗಿನಕಾಯಿಯನ್ನು ಕದ್ದು, ಮಾರಿ ಅದರಿಂದ ಬಂದ ಹಣದಲ್ಲಿ ಸಿನಿಮಾ ನೋಡುತ್ತಿದ್ದರಂತೆ ಈಗ ಭಾರೀ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕೆ. ಮಂಜು. ಈ ವಿಚಾರವನ್ನು ಸ್ವತಃ ನಿರ್ಮಾಪಕರೇ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಂಜು ಹೀಗೆ ಕೊಬ್ಬರಿ ಕಳ್ಳತನ ಮಾಡುತ್ತಿದ್ದುದು ಬೇರೆಲ್ಲೂ ಅಲ್ಲ. ಆಗ ಅವರ ತಂದೆ ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದರು. ಸಿನಿಮಾ ಹುಚ್ಚು ಬೆಳೆಸಿಕೊಂಡಿದ್ದ ಮಂಜು, ಮನೆಯಿಂದಲೇ ಗೋಟು ತೆಂಗಿನಕಾಯಿ ಕಳ್ಳತನ ಮಾಡುತ್ತಿದ್ದರು. ಹೀಗೆ ಸಿನಿಮಾ ಸಿನಿಮಾ ಅಂತ ಬಣ್ಣದ ಲೋಕಕ್ಕೆ ಮರುಳಾದವರು ಅದರಲ್ಲೇ ಬೆಳೆದು ಹೀಗಾಗಿದ್ದಾರೆ.

1997ರಲ್ಲಿ ಕೇವಲ ಎರಡು ಲಕ್ಷ ರೂಪಾಯಿಗಳನ್ನು ಹಿಡಿದುಕೊಂಡು ಗಾಂಧಿನಗರಕ್ಕೆ ಬಂದಿದ್ದ ಮಂಜು 'ಅನುರಾಗ ಸ್ಪಂದನ' ಎಂಬ ಚಿತ್ರ ನಿರ್ಮಿಸಿದ್ದರು. ಅದರ ನಂತರ ಇದುವರೆಗೆ ಅವರು ನಿರ್ಮಿಸಿರುವ ಒಟ್ಟು ಚಿತ್ರಗಳೆಷ್ಟು ಗೊತ್ತೇ? ಬರೋಬ್ಬರಿ 34. ಈಗ ಅವರು ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರು.

ಹಾಗೆಂದು ಮಂಜು ಸಿಕ್ಕಸಿಕ್ಕ ಚಿತ್ರಗಳ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಬರೀ ನಾಯಕ ಅಥವಾ ಗ್ಲ್ಯಾಮರನ್ನು ನೋಡಿಕೊಂಡು ಹಣ ಹಾಕುತ್ತಿಲ್ಲ. ಬದಲಿಗೆ, ಕಥೆಗೆ ಹೆಚ್ಚು ಒತ್ತು ಕೊಡುತ್ತಾರೆ. ಚಿತ್ರಕಥೆ ಹೇಗಿದೆ ಅಂತ ನೋಡುತ್ತಾರೆ. ನಿರ್ದೇಶಕನ ಸಾಮರ್ಥ್ಯವನ್ನು ಅಳೆಯುತ್ತಾರೆ. ನಂತರವಷ್ಟೇ ಉಳಿದ ಸಂಗತಿ.

ಹಾಗೆ ಅತ್ಯುತ್ತಮ ಚಿತ್ರವೇನಾದರೂ ಕೈಗೆ ಸಿಕ್ಕಿದರೆ, ಆಗ ನಾಯಕನಿಗೆ ಕೊಡಬೇಕಾದ ಸಂಭಾವನೆ ಬಗ್ಗೆಯೂ ಮಂಜು ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ಒಳ್ಳೆಯ ಸಿನಿಮಾಕ್ಕಾಗಿ ನಾನು ಏನು ಮಾಡಲೂ ಸಿದ್ಧ. ಮೊನ್ನೆ ಮೊನ್ನೆ ಹಿಟ್ ಎನಿಸಿಕೊಂಡ ಕಳ್ಳ ಮಳ್ಳ ಸುಳ್ಳ ಕೂಡ ಅಷ್ಟೇ. ಅದರಲ್ಲಿ ಶೇ.80ರಷ್ಟು ಹಣ ಈಗಾಗಲೇ ಬಂದಿದೆ. ಇನ್ನುಳಿದಿರುವುದು ಶೇ.20. ಅದೂ ವಾಪಸ್ ಬರುವ ಭರವಸೆ ನನ್ನಲ್ಲಿದೆ ಎನ್ನುತ್ತಾರೆ.

ಕೆಲ ದಿನಗಳ ಹಿಂದಷ್ಟೇ ಕನಸುಗಾರ ರವಿಚಂದ್ರನ್ ವಿರುದ್ಧ ಹರಿಹಾಯ್ದಿದ್ದವರು, ಈಗ ಆ ಬಗ್ಗೆ ಮಾತನಾಡುತ್ತಿಲ್ಲ. ಸುಮ್ಮನೆ ವಿವಾದ ಬೆಳೆಸುವುದು ಬೇಡ ಅಂತ ಹೇಳುತ್ತಿದ್ದಾರೆ.

ಆದರೆ ಅದೇ ಹೊತ್ತಿಗೆ ಇನ್ನೊಂದು ಸಂಗತಿ ಮಂಜು ಬಾಯಿಯಿಂದ ಹೊರ ಬಂದಿದೆ. ಅದು ಜನಸೇವಕನಾಗುವುದು. ಹೌದು, ಮಂಜು ರಾಜಕೀಯಕ್ಕೆ ಬರುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಹಾಗೆಂದು ಸಿನಿರಂಗಕ್ಕೆ ಗುಡ್ ಬೈ ಹೇಳುತ್ತಿಲ್ಲ. ನನ್ನನ್ನು ನಂಬಿ ಪ್ಲೀಸ್ ಅಂತ ಹೇಳಿದ್ದಾರೆ.

ಏನೇ ಆಗಲಿ, ಅವರಿಗೆ ಶುಭವಾಗಲಿ ಎಂದು ನೀವೂ ಹಾರೈಸಿ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ