ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಲು ಇನ್ನು ಕೇವಲ 22 ದಿನ ಬಾಕಿಯಿದೆಯಷ್ಟೇ. ಆದರೆ ಚಿತ್ರತಂಡ ಮಾತ್ರ ಫುಲ್ ಸೈಲೆಂಟ್ ಆಗಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲಂಸ್ ಮತ್ತು ರಿಷಬ್ ಶೆಟ್ಟಿ ಈಗಾಗಲೇ ಘೋಷಿಸಿದ್ದಾರೆ. ಆದರೆ ಇದುವರೆಗೆ ಚಿತ್ರತಂಡದಿಂದ ಒಂದೇ ಒಂದು ಅಪ್ ಡೇಟ್ ಇಲ್ಲ. ನಾಯಕ, ನಾಯಕಿ ಬಿಟ್ಟರೆ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಸ್ಪಷ್ಟ ಚಿತ್ರಣವನ್ನೇ ಚಿತ್ರತಂಡ ಇದುವರೆಗೆ ನೀಡಿಲ್ಲ. ಒಂದೇ ಒಂದು ಪೋಸ್ಟರ್ ಕೂಡಾ ರಿಲೀಸ್ ಮಾಡಿಲ್ಲ.
ರಿಷಬ್ ಹುಟ್ಟುಹಬ್ಬಕ್ಕೆ ಒಂದು ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದು ಬಿಟ್ಟರೆ ಚಿತ್ರತಂಡದಿಂದ ಒಂದೇ ಟೀಸರ್ ಕೂಡಾ ಬಿಡುಗಡೆ ಮಾಡಿಲ್ಲ. ಯಾವಾಗ ಬಿಡುಗಡೆಯಾಗಲಿದೆ ಎಂಬ ದಿನಾಂಕ ಕೂಡಾ ಘೋಷಣೆ ಮಾಡಿಲ್ಲ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂತಾರ ಎಂಬ ಟೈಟಲ್ ಇದ್ದರೆ ಸಾಕು, ಯಾವ ಪ್ರಮೋಷನ್ ಇಲ್ಲದೇ ಇದ್ದರೂ ಗೆಲ್ಲುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸವೇ ಹೊಂಬಾಳೆ ಫಿಲಂಸ್ ಗೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂತಾರ ಮೊದಲ ಸಿನಿಮಾ ಟ್ರೈಲರ್ ಬಿಡುಗಡೆಯಾದಾಗಲೇ ಜನರಿಗೆ ಚಿತ್ರದ ಬಗ್ಗೆ ಕುತೂಹಲ ಮೂಡಿತ್ತು. ಆದರೆ ಈಗ ಕಾಂತಾರ ಚಾಪ್ಟರ್ 1 ರ ಟೀಸರ್ ಕೂಡಾ ಬಿಟ್ಟಿಲ್ಲ. ಹೀಗಿರುವಾಗ ಜನ ಚಿತ್ರರಂಗಕ್ಕೆ ಬರುತ್ತಾರೆ ಎಂದು ಹೇಗೆ ನಂಬುತ್ತೀರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.